ಈ ಬಾರಿಯೂ ಪಕ್ಷದ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ ಜಾರಕಿಹೊಳಿ?

ಬೆಂಗಳೂರು,; ನವೆಂಬರ್ 8: ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬುಧವಾರ ನಡೆಯಲಿರುವ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜನ ಸಂಕಲ್ಪ ಯಾತ್ರೆ ಸಮಾವೇಶಗಳನ್ನು ಆಯೋಜಿಸಿದ್ದು, ಒಟ್ಟು ಎರಡು ತಂಡಗಳಲ್ಲಿ ಬಿಜೆಪಿ ನಾಯಕರು ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದಾರೆ.
ಬುಧವಾರದಂದು ಬೆಳಗಾವಿ ಜಿಲ್ಲೆಯಲ್ಲಿ ಎರಡು ಕಡೆ ಜನ ಸಂಕಲ್ಪ ಸಮಾವೇಶಗಳು ನಡೆಯಲಿವೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷದಿಂದ ದೂರ ಉಳಿದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ, ಖಾನಾಪುರ ಎರಡು ಕಡೆ ಬುಧವಾರ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಈ ಬಾರಿಯೂ ಸಹ ಪಕ್ಷದ ಕಾರ್ಯಕ್ರಮಗಳಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ದೂರ ಉಳಿಯುವ ಸಾಧ್ಯತೆ ಇದೆ. ಯಾಕಂದ್ರೆ ಸಿಡಿ ಕೇಸ್‌ನಲ್ಲಿ ಬಿ ರಿಪೋರ್ಟ್ ನೀಡಿದ್ದರೂ ಸಹ ಇದುವರೆಗೂ ಸಚಿವ ಸ್ಥಾನ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ, ಸಚಿವ ಸ್ಥಾನ ಕೊಡುವವರೆಗೂ ಸಾರ್ವಜನಿಕವಾಗಿ ಮಾತಾಡಲ್ಲ, ಭಾಗವಹಿಸಲ್ಲ ಅಂತ ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಹರಿದಾಡುತ್ತಿದೆ.
ರಾಜಕೀಯ ಪಿತೂರಿಗೆ ಬಲಿಪಶು ಆಗಿರು ತಮ್ಮನ್ನು ಮತ್ತೆ ಸಂಪುಟಕ್ಕ ಸೇರಿಸಿಕೊಳ್ಳಬೇಕೆಂದು ಬೆಳಗಾವಿ ಪ್ರಬಾವಿ ನಾಯಕ ರಮೇಶ್ ಜಾರಕಿಹೊಳಿ ಸಿಎಂ ಬಸವರಾಜ್ ಬೊಮ್ಮಾಯಿಯವರ ಬಳಿ ಹಲವು ಬಾರಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ನನಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದರೇ ತಮ್ಮ ಸಹೋದರ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗಾದರೂ ಸಂಪುಟದಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಸದ್ಯ ಇರುವ ಪರಿಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ ಜಾರಕಿಹೊಳಿ ಸಹೋದರರನ್ನು ಎದುರು ಹಾಕಿಕೊಳ್ಳುವುದಿಲ್ಲ, ಏಕೆಂದರೆ ಬೆಳಗಾವಿ ರಾಜಕೀಯವನ್ನು ಗಮನದರಲ್ಲಿರಿಸಿಕೊಂಡಿರುವ ಪಕ್ಷ, ರಮೇಶ್ ಬದಲಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲೂ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಭಾವಿ ರಾಜಕಾರಣಿಗಳೆನಿಸಿರುವ ಜಾರಕಿಹೊಳಿ ಸಹೋದರರು ಪ್ರಚಾರದ ಕಣಕ್ಕೆ ಇಳಿಯದೆ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ವಿರುದ್ದ ಅಸಮಾಧಾನ ಹೊರಹಾಕಿದ್ದರು.
ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಕಡೆ ಜನಸ್ವರಾಜ್ ಸಮಾವೇಶ ನಡೆದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗೈರಾಗಿದ್ದರು. ಇದು ಬಿಜೆಪಿ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿತ್ತು. ಇನ್ನೂ ಮಳೆಗಾಲದ ಅಧಿವೇಶನದಲ್ಲೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿಗುವ ಮೂಲಕ ಬಸವರಾಜ ಬೊಮ್ಮಾಯಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಅವರದ್ದು ಇದೇನು ಮೊದಲಲ್ಲ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗಲೂ ಸರಿಯಾಗಿ ಅಧಿವೇಶನ ಹಾಗೂ ಸಚಿವ ಸಂಪುಟಕ್ಕೆ ಗೈರಾಗಿರುವ ಸಾಕಷ್ಟು ಉದಾಹರಣೆಗಳು ಇವೆ
ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಗೆ ನಾಲ್ಕು ಸಚಿವರಿದ್ದರು. ಬಳಿಕ ಬೊಮ್ಮಾಯಿ ಸರ್ಕಾರದಲ್ಲಿ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆಗೆ ಅವಕಾಶ ನೀಡಲಾಗಿತ್ತು. ಉಮೇಶ್ ಕತ್ತಿ ನಿಧನ ಹಿನ್ನೆಲೆ ಶಶಿಕಲಾ ಜೊಲ್ಲೆ ಒಬ್ಬರೇ ಜಿಲ್ಲೆಯಲ್ಲಿ ಸಚಿವರಾಗಿದ್ದಾರೆ. ಇದೀಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿ ನನಗೆ ಮಂತ್ರಿ ಸ್ಥಾನ ನೀಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಬೇಡಿಕೆ ಇಟ್ಟಿದ್ದರು. ಆದರೆ ಪ್ರತಿ ಬಾರಿ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾದಾಗ ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ ಹೊರೆತು ಯಾವುದೇ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.