ಬೆಳಗಾವಿ: ಕಲ್ಲು ಕ್ವಾರಿಗೆ ಇಳಿದ ಯುವಕ ನಾಪತ್ತೆ

ಬೆಳಗಾವಿ: ಕಲ್ಲು ಕ್ವಾರಿಗೆ ಇಳಿದ ಯುವಕ ನಾಪತ್ತೆ

ಬೆಳಗಾವಿ: ತಾಲ್ಲೂಕಿನ ಅಲತಗಾ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಕಲ್ಲು ಕ್ವಾರಿಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರಿನಲ್ಲಿ ಇಳಿದಿದ್ದ ಒಬ್ಬ ಯುವಕ ನೀರುಪಾಲಾಗಿದ್ದಾರೆ.

ಅನಗೋಳ ಗ್ರಾಮದ ಸತೀಶ ಹಣಮಣ್ಣವರ (22) ನಾಪತ್ತೆಯಾದವರು. ಮೂವರು ಸ್ನೇಹಿತರು ಮಂಗಳವಾರ ರಾತ್ರಿ ಕ್ವಾರಿ ಬಳಿ ಹೋಗಿ ಪಾರ್ಟಿ ಮಾಡಿದ್ದರು.

ಮದ್ಯ ಕುಡಿದ ನಂತರ ಸತೀಶ ಕ್ವಾರಿ ನೀರಿಗೆ ಇಳಿದು ಆಟವಾಡಲು ಮುಂದಾದರು. ಕೆಲ ಹೊತ್ತಿನ ನಂತರ ನೀರಿನಲ್ಲಿ ಮುಳುಗಿದರು. ತಮಾಶೆ ಮಾಡುತ್ತಿದ್ದಾನೆ ಎಂದು ಉಳಿದಿಬ್ಬರು ಯುವಕರು ನಿರ್ಲಕ್ಷ್ಯ ಮಾಡಿದರು.

ಬಹಳ ಹೊತ್ತಿನ ನಂತರವೂ ಸತೀಶ ಹೊರಬಾರದ್ದನ್ನು ಕಂಡು ಸ್ನೇಹಿತರು ಮನೆಯವರಿಗೆ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಸಮಕ ಸಿಬ್ಬಂದಿ ತಡರಾತ್ರಿಯವರೆಗೆ ತಡಕಾಡಿದರೂ ಸತೀಶ ಸುಳಿವು ಸಿಗಲಿಲ್ಲ.

ಬುಧವಾರ ಕೂಡ ಶೋಧ ಕಾರ್ಯ ಮುಂದುವರಿದಿದೆ. ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.