ನೆಲಮಂಗಲ ಪೊಲೀಸರಿಂದ ಖಡಕ್ ವಾರ್ನಿಂಗ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದಲ್ಲಿ ಇತ್ತೀಚಿಗೆ ಕ್ರೈಂ ದರ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ ಇಲಾಖೆ ಅಪರಾಧ ನಿಯಂತ್ರಣಕ್ಕೆ ಮುಂದಾಗಿದೆ. ನೆಲಮಂಗಲ ಟೌನ್ ಪೊಲೀಸರಿಂದ ನಗರದ ಹಲವೆಡೆ ಗಸ್ತು ಆರಂಭಿಸಲಾಗಿದೆ. ನಗರದಲ್ಲಿ ನಿರ್ಮಾಣವಾಗ್ತಿರೋ ಲೇಔಟ್, ಟೀ ಸ್ಟಾಲ್, ಬಾರ್, ಡಾಬಾಗಳ ಬಳಿ ಯುವಕರ ಹಾವಳಿಯನ್ನು ಗುರುತಿಸಿದೆ. ಈ ಬಗ್ಗೆ ಸಾರ್ವಜನಿಕರ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿನ ಯುವಕರ ಗುಂಪುಗಳ ಮೇಲೆ ಪೊಲೀಸ್ ದಾಳಿ ಮಾಡುತ್ತಿದ್ದಾರೆ. ಸಿಪಿಐ ಕುಮಾರ್, ಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳಿಂದ ದಾಳಿ ಮಾಡಲಾಗುತ್ತಿದೆ. ಈ ವೇಳೆ ನೂತನ ಲೇಔಟ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಯುವಕರಿಂದ ಧೂಮಪಾನ ಮತ್ತು ಮದ್ಯಪಾನ ಹೆಚ್ಚಾಗಿರುವುದನ್ನು ಸಹ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರನ್ನು ಠಾಣೆಗೆ ಕರೆತಂದು ಯುವಕರಿಗೆ ನೆಲಮಂಗಲ ಟೌನ್ ಸಿಪಿಐ ಕುಮಾರ್ ಮತ್ತು ಎಸ್ಐ ಸುರೇಶ್ ತಿಳುವಳಿಕೆ ನೀಡಿ ಕಳುಹಿಸಿದ್ದಾರೆ. ನಗರದ ಲೇಔಟ್, ಬಡಾವಣೆ, ಟೀ ಸ್ಟಾಲ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಯುವಕರು ದೂಮಪಾನ ಮತ್ತು ಮದ್ಯಪಾನ ಸೇವಿಸುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.