ಮಹಿಳಾ ಐಪಿಎಲ್ ವಿಜೇತ ತಂಡಕ್ಕೆ ಸಿಗುವ ಬಹುಮಾನ ಮೊತ್ತವಿದು!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಚೊಚ್ಚಲ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (ಮಹಿಳಾ ಐಪಿಎಲ್) ಅನ್ನು ಅದ್ಧೂರಿಯಾಗಿ ಆರಂಭಿಸಲು ಎಲ್ಲ ತಯಾರಿ ನಡೆಸಿದೆ. ಪುರುಷರ ಐಪಿಎಲ್ ಪಂದ್ಯಾವಳಿಯಂತೆ ಶ್ರೀಮಂತಗೊಳಿಸಲು ಕಳೆದ ಕೆಲವು ವಾರಗಳಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲಿ ಎರಡೂವರೆ ತಿಂಗಳುಗಳ ಕಾಲ ಹಬ್ಬದಂತೆ ಆಚರಿಸಲಾಗುತ್ತದೆ. ಮಹಿಳೆಯರಿಗಾಗಿ ಐಪಿಎಲ್ ಪಂದ್ಯಾವಳಿ ಆಯೋಜಿಸುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಇತರ ಎಲ್ಲ ರಾಷ್ಟ್ರಗಳಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ.
Viacom 18 ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳಿಗಾಗಿ 951 ಕೋಟಿಗೆ ಬಿಡ್ ಗೆದ್ದಿದೆ. ಮಹಿಳಾ ಐಪಿಎಲ್ ಲೀಗ್ ಮಹಿಳೆಯರ NBA ಪಂದ್ಯಾವಳಿ ನಂತರ ಎರಡನೇ ಅತ್ಯಂತ ದುಬಾರಿ ಮಹಿಳಾ ಕ್ರೀಡಾ ಲೀಗ್ ಎನಿಸಿದೆ.
ಆದ್ದರಿಂದ, Viacom 18 ಮಹಿಳಾ ಐಪಿಎಲ್‌ನ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ವ್ಯಯಿಸಲಿದೆ. ನಿಗದಿತ ಬೆಲೆಯೊಂದಿಗೆ ನೋಡುವುದಾದರೆ, ಪುರುಷರ ಐಪಿಎಲ್ ನಂತರ ಎರಡನೇ ದುಬಾರಿ ಮಾಧ್ಯಮ ಹಕ್ಕು ಮಾರಾಟವಾಗಿದೆ.
ಕ್ರಿಕ್‌ಬಝ್‌ನ ಇತ್ತೀಚಿಗೆ ವರದಿ ಮಾಡಿದ ಪ್ರಕಾರ, ಮಹಿಳಾ ಆಟಗಾರ್ತಿಯರಿಗೆ ಐಪಿಎಲ್ ಲೀಗ್‌ಗಾಗಿ ನಿರ್ಧರಿಸಲಾದ ಬಹುಮಾನದ ಮೊತ್ತವು 10 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಮಹಿಳಾ ಐಪಿಎಲ್ ಚಾಂಪಿಯನ್ ತಂಡಕ್ಕೆ 6 ಕೋಟಿ ರೂಪಾಯಿ ಸಿಗಲಿದ್ದರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 3 ಕೋಟಿ ರೂಪಾಯಿ ಬಹುಮಾನದ ಮೊತ್ತ ನೀಡಲಾಗುವುದು.
ಇನ್ನು ಲೀಗ್‌ನಲ್ಲಿ ಮೂರನೇ ಸ್ಥಾನ ಪಡೆಯುವ ತಂಡವು 1 ಕೋಟಿ ರೂ.ಗಲನ್ನು ಪಡೆಯಲಿದೆ ಮತ್ತು ಆಟಗಾರರ ಬಹುಮಾನದ ಶೇ.100 ರಷ್ಟನ್ನು ಆಟಗಾರರಿಗೆ ಮಾತ್ರ ವಿತರಿಸಲಾಗುತ್ತದೆ.
ಫೆಬ್ರವರಿ 26ರಂದು ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯಗೊಳ್ಳುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಂತರ ಭಾರತದಲ್ಲಿ ಚೊಚ್ಚಲ ಬಾರಿಗೆ ಮಹಿಳಾ ಐಪಿಎಲ್ ಪಂದ್ಯಾವಳಿಯನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ.