ಬಿಎಸ್‌ವೈಗೆ ಮತ್ತೆ ಸಂಕಷ್ಟ

ಬಿಎಸ್‌ವೈಗೆ ಮತ್ತೆ ಸಂಕಷ್ಟ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕುಟುಂಬ ಸದಸ್ಯರು ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಕುರಿತು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ. ಈ ವಂಚನೆ ಆರೋಪದಲ್ಲಿ ಭಾಗಿಯಾಗಿರುವ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಗೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್ ಕಂಪನಿಯಿಂದ ಕೋಟ್ಯಂತರ ರೂ. ನಗದು ಹಾಗೂ ಶೆಲ್ ಕಂಪನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಯಡಿಯೂರಪ್ಪ ಹಾಗೂ ಕುಟುಂಬದವರ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ, ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಸಚಿವ ಎಸ್.ಟಿ ಸೋಮಶೇಖರ್, ಶಶಿಧರ ಮರಳಿ, ಸಂಜಯ್‌ಶ್ರೀ, ಚಂದ್ರಕಾಂತ ರಾಮಲಿಂಗಂ, ವಿರುಪಾಕ್ಷಪ್ಪ ಯಮಕನ ಮರಡಿ ಸೇರಿದಂತೆ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದೆ.