ಬೆಂಗಳೂರು, ಮೇ. 18: ಕೊರೊನಾ ವಿಚಾರದಲ್ಲಿ ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಸಮರ ಇದೀಗ ಕಾನೂನು ಸಂಘರ್ಷದ ಹಂತಕ್ಕೆ ಬಂದು ನಿಂತಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ಧ ಔಷಧ ನಿಯಂತ್ರಣಾಲಯಕ್ಕೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ದೂರು ನೀಡಿದ್ದಾರೆ.
ರಕ್ಷಾ ರಾಮಯ್ಯ ಮತ್ತು ತಂಡದವರು ಕೊರೊನಾ ಪೀಡಿತರಿಗೆ ಮೆಡಿಕಲ್ ಕಿಟ್ ಜತೆಗೆ ಸ್ಟಿರಾಯ್ಡ್ ಔಷಧಗಳನ್ನು ಹಂಚಿಕೆ ಮಾಡಿದ್ದಾರೆ. ಸ್ಟಿರಾಯ್ಡ್ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ಸೋಂಕಿತರಿಗೆ ಕೊಡಬೇಕು. ಆದರೆ, ರಕ್ಷಾ ರಾಮಯ್ಯ ತಂಡದವರು ಯಾವ ವೈದ್ಯರ ಸಲಹೆ ಇಲ್ಲದೇ ಕೊರೊನಾ ಸೋಂಕಿತರಿಗೆ ಸ್ಟಿರಾಯ್ಡ್ ಔಷಧಗಳನ್ನು ಹಂಚಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು ಈ ಕುರಿತು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ವಿಜೇಂದ್ರ ದೂರಿನಲ್ಲಿ ಮನವಿ ಮಾಡಿದ್ದಾರೆ. ಇನ್ನು ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ವೈಫಲ್ಯ ಜತೆಗೆ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ರಕ್ಷಾ ರಾಮಯ್ಯ ಅವರು, ಇತ್ತೀಚೆಗೆ ತಮಿಳುನಾಡು ಚುನಾವಣೆ ವೇಳೆಯಲ್ಲೂ ಬಿಜೆಪಿ ಸಾಧನೆ ಬಗ್ಗೆ ಕಾಲು ಎಳೆದಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಕಾಂಗ್ರೆಸ್ ನ್ನು ಕಾಲು ಎಳೆದಿತ್ತು. ಇದೀಗ ಕೊರೊನಾ ಔಷಧ ವಿತರಣೆ ಸಂಬಂಧ ರಕ್ಷಾ ರಾಮಯ್ಯ ವಿರುದ್ಧ ದೂರು ಸಲ್ಲಿಸುವ ಮೂಲಕ ಬಿಜೆಪಿ ಯುವ ಮೋರ್ಚಾ ಒಂದು ಹೆಜ್ಜೆ ಮುಂದಿಟ್ಟಿದೆ.