ಮಾಹಿತಿ ಒದಗಿಸಲು ವಿಳಂಬ ಮಾಡಿದ ಪಿಐಒಗೆ ದಂಡ: 25 ಸಾವಿರ ರೂ. ದಂಡ ವಿಧಿಸಿದ ರಾಜ್ಯ ಮಾಹಿತಿ ಆಯೋಗ

ಮಾಹಿತಿ ಒದಗಿಸಲು ವಿಳಂಬ ಮಾಡಿದ ಪಿಐಒಗೆ ದಂಡ: 25 ಸಾವಿರ ರೂ. ದಂಡ ವಿಧಿಸಿದ ರಾಜ್ಯ ಮಾಹಿತಿ ಆಯೋಗ

ಜಗನ್ ರಮೇಶ್ ಬೆಂಗಳೂರು

ಮಾಹಿತಿ ಹಕ್ಕು (ಆರ್​ಟಿಐ) ಕಾಯ್ದೆಯಡಿ ವಕೀಲರೊಬ್ಬರು ಕೋರಿದ್ದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಒದಗಿಸಲು ವಿಫಲವಾಗಿದ್ದಲ್ಲದೆ, ಅರ್ಜಿಯಲ್ಲಿ ಕೋರಲಾದ ಮಾಹಿತಿ ಬೇರೊಂದು ಪ್ರಾಧಿಕಾರಕ್ಕೆ ಸಂಬಂಧಿಸಿದ್ದು ಅಲ್ಲಿಯೇ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವಂತೆ ಹಿಂಬರಹ ನೀಡಿದ್ದ ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರಾಜ್ಯ ಮಾಹಿತಿ ಆಯೋಗ 25 ಸಾವಿರ ರೂ.

ದಂಡ ವಿಧಿಸಿದೆ. ಬಿಇಒ ಕಚೇರಿಯ ವ್ಯವಸ್ಥಾಪಕರೂ ಆದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ರಘುನಾಥನ್ ಹಾಗೂ ಅವರಿಂದ ಮಾಹಿತಿ ಕೊಡಿಸಲು ವಿಫಲವಾಗಿದ್ದ ಪ್ರಥಮ ಮೇಲ್ಮನವಿ ಪ್ರಾಧಿಕಾರದ ವಿರುದ್ಧ ಮೈಸೂರಿನ ಕನ್ನೇಗೌಡನಕೊಪ್ಪಲಿನ ವಕೀಲ ಸಾ.ತಿ. ಸದಾನಂದಗೌಡ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ. ಸತ್ಯನ್ ಈ ಆದೇಶ ಮಾಡಿದ್ದಾರೆ.

ಪ್ರಕರಣವೇನು?: ಸದಾನಂದ ಗೌಡ 2020ರ ಡಿ.4ರಂದು ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್ 6(1)ರ ಅನ್ವಯ ಅರ್ಜಿ ಸಲ್ಲಿಸಿ, ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಎಲ್ಲ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ವಿವರಗಳ ದೃಢೀಕೃತ ಪ್ರತಿಗಳನ್ನು ನೀಡುವಂತೆ ಕೋರಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಕಾರಣ 2021ರ ಜ.5ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಮಾಹಿತಿ ಕೊಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಆರ್​ಟಿಐ ಕಾಯ್ದೆಯ ಸೆಕ್ಷನ್ 19(3) ರ ಅನ್ವಯ 2021ರ ಮಾ.30ರಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಹಿಂಬರಹಕ್ಕೆ ಆಕ್ಷೇಪ: ಮೇಲ್ಮನವಿದಾರರು 2020ರ ಡಿ.4ರಂದು ಮಾಹಿತಿ ಕೋರಿ ಪ್ರತಿವಾದಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ನಿಯಮಾನುಸಾರ 30 ದಿನಗಳ ಒಳಗೆ ಮಾಹಿತಿ ಒದಗಿಸಬೇಕಿತ್ತು. ಒಂದು ವೇಳೆ, ಕೋರಲಾದ ಮಾಹಿತಿ ಬೇರೆ ಯಾವುದಾದರೂ ಸಾರ್ವಜನಿಕ ಪ್ರಾಧಿಕಾರದ ಬಳಿ ಲಭ್ಯವಿದ್ದರೆ ಆರ್​ಟಿಐ ಅಧಿನಿಯಮ 2005ರ ಸೆಕ್ಷನ್ 6(3)ರ ಅಡಿಯಲ್ಲಿ ನಿಯಮಾನುಸಾರ 5 ದಿನಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸಿ, ಆ ಬಗ್ಗೆ ಮೇಲ್ಮನವಿದಾರರಿಗೆ ತಿಳಿಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ನಿಗದಿತ ಅವಧಿ ಮುಗಿದ ಬಳಿಕ 2021ರ ಜ.18ರಂದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿ, ಹಿಂಬರಹ ನೀಡಲಾಗಿದೆ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿ, ಹಿಂಬರಹವನ್ನು ತಿರಸ್ಕರಿಸಿತ್ತು.

ಸಮಜಾಯಿಷಿ ಕೇಳಿದ್ದ ಆಯೋಗ: ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿ ನಮ್ಮ ಕಚೇರಿ ವ್ಯಾಪ್ತಿಗೆ ಒಳಪಡದಿರುವುದರಿಂದ ಹಾಗೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಶಾಲೆಯು ಉತ್ತರ ವಲಯದ ಬಿಇಒ ಕಚೇರಿಗೆ ವ್ಯಾಪ್ತಿಗೆ ಬರಲಿದ್ದು, ಅಲ್ಲಿಯೇ ನೇರವಾಗಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಮಾಹಿತಿ ಕೋರಿ 665 ದಿನಗಳಿಗೂ ಅಧಿಕ ಸಮಯವಾಗಿದ್ದರೂ ಮಾಹಿತಿ ಒದಗಿಸಿಲ್ಲ. ಮೇಲ್ಮನವಿದಾರರು ಮಾಹಿತಿ ಆಯೋಗದ ಮೆಟ್ಟಿಲೇರಿದ ಬಳಿಕ, ಆಯೋಗ ನೋಟಿಸ್ ನೀಡಿದ್ದರಿಂದ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ತರಿಸಿಕೊಂಡು, 2022ರ ನ.23ರಂದು ಮೇಲ್ಮನವಿದಾರರಿಗೆ ಒದಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ಒದಗಿಸಲು ವಿಳಂಬ ಮಾಡಿರುವುದರಿಂದ, ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 20(1)ರ ಅಡಿಯಲ್ಲಿ 25 ಸಾವಿರ ರೂ. ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಸಮಜಾಯಿಷಿ ನೀಡುವಂತೆ ರಘುನಾಥನ್​ಗೆ ನಿರ್ದೇಶಿಸಿತ್ತು.

ನಿರ್ಲಕ್ಷ್ಯ ಧೋರಣೆಗೆ ದಂಡ: ಆಯೋಗದ ಆದೇಶದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಹಿತಿ ತರಿಸಿಕೊಂಡು ಮೇಲ್ಮನವಿದಾರರಿಗೆ ಒದಗಿಸಿದ್ದ ರಘುನಾಥನ್, ತಮ್ಮ ವಿರುದ್ಧ ದಂಡದ ಕ್ರಮ ಜರುಗಿಸದ ಬಗ್ಗೆ ಯಾವುದೇ ಲಿಖಿತ ಸಮಜಾಯಿಷಿ ಸಲ್ಲಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ದಂಡ ವಿಧಿಸುವ ಎಚ್ಚರಿಕೆ ನೀಡಿದ ಬಳಿಕ ಮೈಸೂರು ದಕ್ಷಿಣ ವಲಯದ ಬಿಇಒ ಕಚೇರಿಯ ಪಿಐಒ ರಘುನಾಥನ್ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿದ್ದಾರೆ. ದಂಡ ವಿಧಿಸುವ ವಿಚಾರದಲ್ಲಿ ಯಾವುದೇ ಲಿಖಿತ ಸಮಜಾಯಿಷಿಯನ್ನೂ ನೀಡಿಲ್ಲ. ಆದ್ದರಿಂದ, ಅವರು ದಂಡನೆಗೆ ಅರ್ಹರಾಗಿದ್ದಾರೆ ಎಂಬ ತೀರ್ವನಕ್ಕೆ ಬಂದಿದೆ. ಪ್ರಕರಣದಲ್ಲಿ ನಿಯಮಾನುಸಾರ ಮಾಹಿತಿ ಒದಗಿಸದೆ, ನಿರ್ಲಕ್ಷ್ಯ ಧೋರಣೆ ತೋರಲಾಗಿದೆ. ರಘುನಾಥನ್ ಅವರಿಗೆ 25 ಸಾವಿರ ರೂ. ದಂಡ ವಿಧಿಸ ಲಾಗಿದೆ. ದಂಡದ ಮೊತ್ತವನ್ನು ಏಕ ಕಂತಿನಲ್ಲಿ ಅಥವಾ ಅವರ ಮಾಸಿಕ ವೇತನದಲ್ಲಿ 12,500 ರೂ.ಗಳಂತೆ 2 ಕಂತುಗಳಲ್ಲಿ ಒಟ್ಟು 25 ಸಾವಿರ ರೂ. ಕಡಿತಗೊಳಿಸಬೇಕು. ಈ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಿ, ರಸೀದಿಯೊಂದಿಗೆ ವರದಿ ಸಲ್ಲಿಸಬೇಕು ಎಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಯೋಗ ನಿರ್ದೇಶಿಸಿದೆ.