ಕೊರೊನಾ ಸೋಂಕಿಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ ಸರ್ಕಾರಿ ನೌಕರಿ!

ಕೊರೊನಾ ಸೋಂಕಿಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ ಸರ್ಕಾರಿ ನೌಕರಿ!

ಬೆಂಗಳೂರು, ನ. 15: ಕೋವಿಡ್ 19ಗೆ ಬಲಿಯಾದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೋವಿಡ್19 ನಿಂದ ಮೃತಪಟ್ಟ 90 ಪೊಲೀಸ್ ಕುಟುಂಬಗಳೀಗೆ ಮ್ಯಾನ್‌ ಕೈಂಡ್ ಫಾರ್ಮಾ ವತಿಯಿಂದ ತಲಾ ಮೂರು ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿ ಮಾತನಾಡಿದರು.

''ಕೋವಿಡ್‌ನಿಂದ ನಿಧನ ಹೊಂದಿದ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದರ ಜತೆಗೆ ಕುಟುಂಬದ ಅವಲಂಬಿತರಿಗೆ ಸರ್ಕಾರದ ಉದ್ಯೋಗ ಕೊಡಲಾಗುವುದು. ನೊಂದ ಕುಟುಂಬಗಳು ಧೈರ್ಯದಿಂದ ಇರಬೇಕು,'' ಎಂದು ಇದೇ ವೇಳೆ ಸಾಂತ್ವನ ಹೇಳಿದರು.

ಮ್ಯಾನ್ ಕೈಂಡ್ ಫಾರ್ಮಾ ಡಿವಿಜನಲ್ ಮ್ಯಾನೇಜರ್ ಮನೀಶ್ ಅರೋರಾ ಮಾತನಾಡಿ, ''ಕೋವಿಡ್ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಂಸ್ಥೆ ವತಿಯಿಂದ ಸಣ್ಣದೊಂದು ಸೇವೆ ಮಾಡುತ್ತಿದ್ದೇವೆ ಎಂದು ಸ್ಮರಿಸಿದರು. ಇದೇ ವೇಳೆ ಪೊಲೀಸ್ ಇಲಾಖೆಯ 90 ಲಕ್ಷ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ. ಚೆಕ್ ವಿತರಣೆ ಮಾಡಿದರು.

ಕೊರೊನಾ ಸೋಂಕಿನ ಮೊದಲನೇ ಅಲೆಗೆ ಅನೇಕ ಪೊಲೀಸರು ಜೀವ ತೆತ್ತಿದ್ದರು. ಎರಡನೇ ಅಲೆಯಂತೂ ಪೊಲೀಸರ ಪಾಲಿಗೆ ಮರಣ ಮೃದಂಗವಾಗಿತ್ತು. ಎಷ್ಟೋ ಪೊಲೀಸರಿಗೆ ಕೊರೊನಾ ಸೋಂಕಿಗೆ ಹಾಸಿಗೆ ಸಿಗದೇ ಪರದಾಡಿದ್ದರು. ಪೊಲೀಸರ ಸಂಕಷ್ಟ ನೋಡಿ ವಿಭಾಗವಾರು ಬೆಂಗಳೂರು ಡಿಸಿಪಿಗಳೇ ಅಪಾರ್ಟ್‌ಮೆಂಟ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತನೆ ಮಾಡಿ ಪೊಲೀಸ್ ಸಿಬ್ಬಂದಿಯ ಜೀವ ಉಳಿಸಲು ಮುಂದಾಗಿದ್ದರು. ಅದರ ನಡುವೆಯೂ ಕರ್ನಾಟಕ ರಾಜ್ಯದಲ್ಲಿ ಅನೇಕ ಪೊಲೀಸ್ ಸಿಬ್ಬಂದಿ ಜೀವ ತ್ಯಾಗ ಮಾಡಿದ್ದರು. ಕೋವಿಡ್ ಸೋಂಕಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರಿ ನೌಕರಿ ನೀಡುವಂತೆ ಮೃತ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರೇ ಸ್ವತಃ ಕೋವಿಡ್ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಭರವಸೆ ನೀಡಿದ್ದಾರೆ.

30 ಲಕ್ಷ ರೂ. ಪರಿಹಾರ ಸಿಕ್ಕಿರುವುದು ನಿಜವೇ?: ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಕೋವಿಡ್‌ಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ನಿಜವಾಗಿಯೂ ಎಲ್ಲಾ ಕುಟುಂಬಗಳಿಗೆ ತಲುಪಿದೆಯಾ ಎಂಬುದನ್ನು ಪೊಲೀಸ್ ಇಲಾಖೆಯೇ ಸ್ಪಷ್ಟ ಪಡಿಸಬೇಕು. ಕೋವಿಡ್ ಸೋಂಕಿಗೆ ಬಲಿಯಾಗಿದ್ದ ಕೆಲ ಪೊಲೀಸ್ ಕುಟುಂಬಗಳು ಪರಿಹಾರಕ್ಕೆ ಮನವಿ ಮಾಡಿದ್ದವು. ಪರಿಹಾರ ಸಿಗದೇ ಅಲೆದಾಡುವಂತಾಗಿತ್ತು.

ವಾರಿಯರ್ಸ್: ಕೊರೊನಾ ದಿನಗಳನ್ನು ನೆನಪಿಸಿಕೊಂಡರೆ ಕಣ್ಣು ಎದುರು ಬರುವುದು ಪೊಲೀಸರು. ಲಾಕ್‌ಡೌನ್ ವೇಳೆ ಜನರು ಮನೆಯಲ್ಲಿರುತ್ತಿದ್ದರು. ಜೀವದ ಹಂಗು ತೊರೆದು ಬೀದಿಗೆ ಇಳಿದು ಕೆಲಸ ಮಾಡಿದ್ದು ಪೊಲೀಸ್ ಸಿಬ್ಬಂದಿ. ಪೊಲೀಸರ ಜನ ಸೇವೆ ನೋಡಿ ಅನೇಕ ಕಡೆ ಹೂವಿನ ತರ್ಪಣ ಮಾಡಿದ್ದರು. ಪೊಲೀಸರೆಂದರೆ ಕೇವಲ ಕಾನೂನು ಕಾಪಾಡುವುದು, ರಕ್ಷಣೆ ಮಾಡವುದು ಮಾತ್ರವಲ್ಲ, ಜನ ಸೇವಕರು ಎಂಬುದನ್ನು ನಿರೂಪಿಸಿದ್ದರು. ಆಕ್ಸಿಜನ್ ಸಿಗದೇ ಇದ್ದಾಗ ಪೊಲೀಸ್ ಅಧಿಕಾರಿಗಳೇ ಸ್ವತಃ ಫೀಲ್ಡ್‌ಗೆ ಇಳಿದು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವ ಕಾರ್ಯ ನಡೆಸಿದ್ದರು. ಅಂತಹ ಘಟನೆಗಳು ಅನೇಕವು ಕಣ್ಣು ಮುಂದೆ ಬಂದು ಹೋಗುತ್ತವೆ. ಯಲಹಂಕದಲ್ಲಿ ಆಕ್ಸಿಜನ್ ಇಲ್ಲದೇ ಎಂಟು ಮಂದಿ ಕೋವಿಡ್ ರೋಗಿಗಳು ಜೀವನ್ಮರಣ ಹೋರಾಟ ನಡೆಸಿದಾಗ ಪೊಲೀಸ್ ಇನ್‌ಸ್ಪೆಕ್ಟರ್ ಸೋನು ಸೂದ್ ಟ್ರಸ್ಟ್ ಸಂಪರ್ಕಿಸಿ ಕೆಲವೇ ತಾಸಿನಲ್ಲಿ ಆಕ್ಸಿಜನ್ ಪೂರೈಸಿದ್ದರು. ಈ ಸಂಗತಿ ಇಡೀ ರಾಜ್ಯವನ್ನೇ ಸಂಚಲನ ಮೂಡಿಸಿತ್ತು.