ಡಿ.31ರ ಬಂದ್ ತೀರ್ಮಾನದಲ್ಲಿ ಬದಲಾವಣೆ ಇಲ್ಲ; ವಾಟಾಳ್

ಬೆಳಗಾವಿ, ಡಿಸೆಂಬರ್ 29; ಎಂಇಎಸ್ ನಿಷೇಧಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 31ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
"ಡಿಸೆಂಬರ್ 31ರ ಕರ್ನಾಟಕ ಬಂದ್ ಶತ ಸಿದ್ಧ ಅದಕ್ಕೆ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಕನ್ನಡಿಗರು ಬೆಂಬಲ ನೀಡಬೇಕು. ಎಂಇಎಸ್ ಪುಂಡರ, ರೌಡಿಗಳ ವಿರುದ್ಧ ನಮ್ಮ ಹೋರಾಟ ಇದಾಗಿದೆ" ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಶುಕ್ರವಾರ ಕರ್ನಾಟಕ ಬಂದ್ ಅಂಗವಾಗಿ ಬೆಂಗಳೂರು ನಗರದ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಆದರೆ 30ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿವೆ.
ರಾಜಭವನ ಚಲೋ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಹೇಳಿದ್ದಾರೆ. ರಕ್ಷಣಾ ವೇದಿಕೆ ಸೇರಿದಂತೆ ಇತರ ಕನ್ನಡಪರ ಸಂಘಟನೆಗಳು ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಗುರುವಾರ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿವೆ.
ಬಂದ್ ಮುಂದೂಡಲು ಪತ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಡಿಸೆಂಬರ್ 31ರ ಕರ್ನಾಟಕ ಬಂದ್ ಮುಂದೂಡಿ ಎಂದು ಕನ್ನಡ ಒಕ್ಕೂಟಕ್ಕೆ ಪತ್ರವನ್ನು ಬರೆದಿದ್ದಾರೆ.
ಕನ್ನಡದ, ಕನ್ನಡಿಗರ, ಕನ್ನಡಪರ ಹೋರಾಟರಾರರ ಪ್ರಶ್ನಾತೀತ ನಾಯಕರೇ ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿಕೊಳ್ಳುವುದೇನೆಂದರೆ 22/1/2021ರಂದು ನಾವೆಲ್ಲರೂ ಒಮ್ಮತದಿಂದ ಡಿಸೆಂಬರ್ 31ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದು ಸರಿಯಷ್ಟೇ. ಆದರೆ ನಂತರ ನಡೆದ ಹಲವಾರು ಬೆಳವಣಿಗೆಗಳು ನಮ್ಮ ಈ ನಿರ್ಧಾರ ಪ್ರಸ್ತುತವಾಗಿ ಸರಿ ಇಲ್ಲವೆಂಬ ಭಾವನೆ ಮೂಡುತ್ತಿದೆ.
ಕಾರಣ ಓಮಿಕ್ರಾನ್ ಈಗಾಲಗೇ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಇದರಿಂದಾಗಿ ಸೆಕ್ಷನ್ 144 ಮತ್ತು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈಗಾಗಲೇ ಕೋವಿಡ್ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿರು ವರ್ತಕರು, ವಾಣಿಜೋದ್ಯಮಿಗಳು, ಹೋಟೆಲ್ ಮಾಲೀಕರು ನಮ್ಮ ನಿರ್ಧಾರದಿಂದ ಆತಂಕದಲ್ಲಿದ್ದಾರೆ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಸದಾಕಾಲ ನಮ್ಮ ಜೊತೆ ನಿಲ್ಲುತ್ತಿದ್ದ ಚಿತ್ರೋದ್ಯಮ, ಕೆಲವು ಸಂಘಟನೆಗಳು ತಮ್ಮ ಅಸಮಾಧಾನ ಹೊರ ಹಾಕಿವೆ. ಬಹಳ ಪ್ರಮುಖವಾಗಿ ಬೆಳಗಾವಿ ಕ್ರಿಯಾ ಸಮಿತಿ ಕೂಡ ನಮ್ಮ ಬಂದ್‌ಗೆ ಬೆಂಬಲ ನೀಡುತ್ತಿಲ್ಲ. ನಮ್ಮ ಸಂಘಟನೆಯ ಪದಾಧಿಕಾರಿಗಳು ಸಹ ಬಂದ್ ಬಗ್ಗೆ ಸಹಮತ ವ್ಯಕ್ತಪಡಿಸಿಲ್ಲ.
ಈ ಎಲ್ಲಾ ಕಾರಣಗಳನ್ನು ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಬಂದ್ ದಿನಾಂಕವನ್ನು ಮುಂದೂಡುದುವು ಸೂಕ್ತ. ಮುಂದಿನ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗದಿಗೊಳಿಸೋಣ ಎಂದು ಪ್ರವೀಣ್ ಶೆಟ್ಟಿ ಕನ್ನಡ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ.