ಪೂಜೆ ನಡೆಯುತ್ತಿರುವಾಗಲೇ ಶಿವ ದೇವಾಲಯ ಕುಸಿತ, ಭರದಿಂದ ಸಾಗಿದ ಭಕ್ತರ ರಕ್ಷಣಾ ಕಾರ್ಯಾಚರಣೆ

ಜೈಪುರ: ದೇವರ ಪೂಜೆ ನಡೆಯುತ್ತಿರುವಾಗಲೇ ಶಿವ ದೇವಸ್ಥಾನ ಕುಸಿದುಬಿದ್ದ ಘಟನೆ ಇಂದು(ಮಂಗಳವಾರ) ಬೆಳಗ್ಗೆ ರಾಜಸ್ಥಾನದ ಕರೌಲಿ ಎಂಬಲ್ಲಿ ಸಂಭವಿಸಿದೆ.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯರ ಗುಂಪು ಅವಶೇಷಗಳಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ದೇವಸ್ಥಾನದ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ವೇಳೆ ಗುಂಡಿ ತೆಗೆಯುತ್ತಿದ್ದ ಇಟಾಚಿಯು ದೇವಸ್ಥಾನಕ್ಕೆ ಆಕಸ್ಮಿಕವಾಗಿ ತಾಗಿದ್ದು, ದೇವಸ್ಥಾನ ಏಕಾಏಕಿ ಕುಸಿದು ಬಿದ್ದಿದೆ. ಇದ್ಯಾವುದರ ಪರಿವೇ ಇಲ್ಲದೆ, ದೇಗುಲದೊಳಗೆ ಶಿವನ ನಾಮಸ್ಮರಣೆ ಮಾಡುತ್ತಿದ್ದ ಭಕ್ತರು ಅವಶೇಷಗಳಡಿ ಸಿಲುಕಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಇದುವರೆಗೆ ನಾಲ್ವರನ್ನ ರಕ್ಷಿಸಲಾಗಿದೆ.(ಏಜೆನ್ಸೀಸ್)