ರಾಗಿ ಬೆಳೆಗಾರರಿಗೆ ಗುಡ್ ನ್ಯೂಸ್ : ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಗೆ ಡಿ. 15 ರಿಂದ ನೋಂದಣಿ

ರಾಗಿ ಬೆಳೆಗಾರರಿಗೆ ಗುಡ್ ನ್ಯೂಸ್ : ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಗೆ ಡಿ. 15 ರಿಂದ ನೋಂದಣಿ

ಬೆಂಗಳೂರು : ಕೇಂದ್ರ ಸರ್ಕಾರವು 2022-23 ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 3,578 ರೂ ದರದಲ್ಲಿ ರಾಗಿ ಖರೀದಿಸಲು ಆದೇಶಿಸಿದೆ. ಜಿಲ್ಲೆಯಲ್ಲಿ ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ಸಂಬಧಿಸಿದಂತೆ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.

ಜನವರಿ 1 ರಿಂದ ಜಿಲ್ಲೆಯ ಐದು ಸ್ಥಳಗಳಲ್ಲಿ ರಾಗಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿಂದು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತ ಕಾರ್ಯಪಡೆಯ ಮೊದಲನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿ ರಾಜ್ಯದಾದ್ಯಂತ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ನಿಗದಿಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ತಲಾ ಒಂದು ಹಾಗೂ ದೊಡ್ಡಬಳ್ಳಾಪುರದ ಸಾಸಲು ಹೋಬಳಿಯಲ್ಲಿ ಒಂದು ಹೆಚ್ಚುವರಿ ಸಂಗ್ರಹಣಾ ಕೇಂದ್ರ ಸೇರಿ ಒಟ್ಟು 5 ರಾಗಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗುವುದು ಅಗತ್ಯ ಬಿದ್ದರೆ ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರತಿ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲು ತಿಳಿಸಿದರು.