ರೂಪೇಶ್ ರಾಜಣ್ಣ ವಿಚಾರದಲ್ಲಿ ಕ್ಷಮೆ ಕೇಳಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ
ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ 9ರಿಂದ ಪ್ರಶಾಂತ್ ಸಂಬರಗಿ ಅವರನ್ನು ಹೊರಗೆ ಹಾಕುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸ್ಪರ್ಧಿ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಿದ್ದಾರೆ.
ಬಿಗ್‌ಬಾಸ್ ಶೋನ ಕೋಣೆಯೊಳಗೆ ಹೋಗಿ ರೂಪೇಶ್ ರಾಜಣ್ಣ ವಿಷಯದಲ್ಲಿ ಕನ್ನಡ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಂಬರಗಿ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ.
ಇದೇ ವಿಚಾರವಾಗಿ ಶೋನ ಚಿತ್ರೀಕರಣ ನಡೆದಿರುವ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿ ಮುಂಭಾಗ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಸಹ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾಜಣ್ಣ ಅವರನ್ನು ನಿಂದಿಸಿರುವ ಪ್ರಶಾಂತ್, ಕನ್ನಡಪರ ಹೋರಾಟಗಾರರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಸ್ಪರ್ಧೆಯಿಂದ ಹೊರ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಪ್ರಶಾಂತ್ ಸಂಬರಗಿ ಎನ್ನುವ ವ್ಯಕ್ತಿ ಪ್ರಚಾರಕ್ಕೋಸ್ಕರ ಕನ್ನಡಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಶೋನಿಂದ ಹೊರಹಾಕುವ ಜೊತೆಗೆ ಇಲ್ಲಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಸರ್ಕಾರವೇ ಬಿಗ್‌ಬಾಸ್ ಚಿತ್ರೀಕರಣಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು.