70ಕಿಲೋ ಮೀಟರ್ ಪ್ರಯಾಣ,512 ಕೆಜಿ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದೆಷ್ಟು ಗೊತ್ತಾ?

70ಕಿಲೋ ಮೀಟರ್ ಪ್ರಯಾಣ,512 ಕೆಜಿ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದೆಷ್ಟು ಗೊತ್ತಾ?

ಕೊಲ್ಹಾಪುರ: ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಬೋರಗಾಂವ್ ಗ್ರಾಮದ ಈರುಳ್ಳಿ ಕೃಷಿಕ ರಾಜೇಂದ್ರ ತುಕಾರಾಂ ಚವಾಣ್ (58ವರ್ಷ) ಎಂಬವರು ಇತ್ತೀಚೆಗೆ ತಾವು ಬೆಳೆದ 512ಕೆಜಿ ಈರುಳ್ಳಿಯನ್ನು 70 ಕಿಲೋ ಮೀಟರ್ ದೂರದ ಸೋಲಾಪುರ ಎಪಿಎಂಸಿಯಲ್ಲಿ ಹರಾಜು ಹಾಕಿದ್ದರು.

ಆದರೆ ಅವರು ತಾವು ಬೆಳೆದ ಈರುಳ್ಳಿಯನ್ನು ಪ್ರತಿ ಕೇಜಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲು ಸಾಧ್ಯವಾಗಿರುವುದಾಗಿ ವರದಿ ತಿಳಿಸಿದೆ.

ಬರೋಬ್ಬರಿ 70 ಕಿಲೋ ಮೀಟರ್ ಪ್ರಯಾಣಿಸಿ ಸೋಲಾಪುರ ಎಪಿಎಂಸಿಯಲ್ಲಿ ಈರುಳ್ಳಿಯನ್ನು ಹರಾಜು ಹಾಕಿದ್ದ ಚವಾಣ್ ಅವರಿಗೆ ಕೊನೆಗೆ ಲಾಭವಾಗಿದ್ದು ಕೇವಲ 2.49 ಪೈಸೆ. ಈ ಹರಾಜುಗೊಂಡ ಈರುಳ್ಳಿಗೆ ಸಿಕ್ಕ 2 ರೂಪಾಯಿ ಪೋಸ್ಟ್ ಡೇಟೆಡ್ ಚೆಕ್ ಅನ್ನು ಚವಾಣ್ ಪಡೆದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬ್ಯಾಂಕ್ ವಹಿವಾಟಿನಲ್ಲಿ ಚೆಕ್ ಗಳಲ್ಲಿ ಪೈಸೆಗಳನ್ನು ಪರಿಗಣಿಸುವುದಿಲ್ಲವಾಗಿದ್ದರಿಂದ 49ಪೈಸೆ ಬಿಟ್ಟು, ಕೇವಲ 2 ರೂಪಾಯಿಯ ಚೆಕ್ ಅನ್ನು ಎಪಿಎಂಸಿ ಚವಾಣ್ ಅವರಿಗೆ ಕಳುಹಿಸಿದೆ. ತಾನು ಬೆಳೆದ ಈರುಳ್ಳಿಯನ್ನು ನೇರವಾಗಿ ವ್ಯಾಪಾರಿಗಳಿಗೆ ನೀಡಿದ್ದರೆ ಸ್ವಲ್ಪವಾದರೂ ಲಾಭವಾಗುತ್ತಿತ್ತು. ಆದರೆ ಇಷ್ಟೊಂದು ಶ್ರಮಪಟ್ಟು ಬೆಳೆದ ಬೆಳೆಗೆ ನಮಗೇನೂ ಸಿಕ್ಕಂತಾಗಿದೆ ಎಂದು ಚವಾಣ್ ಪ್ರತಿಕ್ರಿಯಿಸಿರುವುದಾಗಿ ವರದಿ ವಿವರಿಸಿದೆ.

ಏನಿದು ಎಪಿಎಂಸಿ ಲೆಕ್ಕಾಚಾರ?

ಚವಾಣ್ ಅವರು ಪ್ರತಿ ಕೇಜಿ ಈರುಳ್ಳಿಗೆ ಒಂದು ರೂಪಾಯಿಯಂತೆ ಹಣ ಪಡೆದಿದ್ದರು. ಒಟ್ಟು 512ಕೆಜಿ ಈರುಳ್ಳಿಗೆ ಎಪಿಎಂಸಿ 512 ರೂ. ಲೆಕ್ಕಹಾಕಿತ್ತು. ನಂತರ ಸಾರಿಗೆ ಮತ್ತು ತೂಕದ ಶುಲ್ಕ ಸೇರಿ ಒಟ್ಟು ಮೊತ್ತದಲ್ಲಿ 509.50 ಪೈಸೆಯನ್ನು ಕಡಿತಗೊಳಿಸಿ, ಕೊನೆಗೆ 2ರೂಪಾಯಿ ಚೆಕ್ ಅನ್ನು ಕಳುಹಿಸಿಕೊಟ್ಟಿತ್ತು.

ಕಳೆದ 3-4 ವರ್ಷಗಳಿಂದ ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ದುಬಾರಿಯಾಗಿದೆ. 500 ಕೇಜಿ ಈರುಳ್ಳಿ ಬೆಳೆಯಲು ಸುಮಾರು 40 ಸಾವಿರ ರೂಪಾಯಿ ಖರ್ಚು ಮಾಡಿರುವುದಾಗಿ ಚವಾಣ್ ಅಳಲು ತೋಡಿಕೊಂಡಿದ್ದಾರೆ.

ಎಪಿಎಂಸಿ ಟ್ರೇಡರ್ ವಾದವೇನು?

ಈರುಳ್ಳಿ ಬೆಳೆಗಾರ ಚವಾಣ್ ಅವರಿಗೆ 2 ರೂಪಾಯಿಗೆ ಪೋಸ್ಟ್ ಡೇಟೆಡ್ ಚೆಕ್ ನೀಡಿರುವ ಬಗ್ಗೆ ಸೋಲಾಪುರ್ ಎಪಿಎಂಸಿ ಟ್ರೇಡರ್ ನಾಸಿರ್ ಖಲೀಫಾ ಪ್ರತಿಕ್ರಿಯೆ ನೀಡಿದ್ದು, ನಾವು ಕಂಪ್ಯೂಟರ್ ಪ್ರಕ್ರಿಯೆಯ ಮೂಲಕ ಚೆಕ್ಸ್ ಮತ್ತು ಬಿಲ್ ಅನ್ನು ನೀಡುತ್ತೇವೆ. ಅದೇ ರೀತಿ ಚವಾಣ್ ಅವರಿಗೂ ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದೇವೆ. ಈ ಹಿಂದೆಯೂ ನಾವು ತುಂಬಾ ಕಡಿಮೆ ಮೊತ್ತದ ಚೆಕ್ ಅನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ತುಂಬಾ ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಹರಾಜು ಹಾಕಲು ತರುತ್ತಾರೆ. ಈ ಮೊದಲು ಚವಾಣ್ ಅವರು ಉತ್ತಮ ಗುಣಮಟ್ಟದ ಈರುಳ್ಳಿಯನ್ನು ತಂದಿದ್ದು, ಪ್ರತಿ ಕೇಜಿಗೆ 18 ರೂಪಾಯಿಯಂತೆ ಮಾರಾಟ ಮಾಡಿದ್ದರು. ಕಡಿಮೆ ಗುಣಮಟ್ಟದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಎಂದು ಖಲೀಫಾ ತಿಳಿಸಿದ್ದಾರೆ.