ಕನ್ನಡಿಗರನ್ನು ಗುಲಾಮರನ್ನಾಗಿ ಮಾಡ್ತಿದ್ದಾರೆ; ಇವರೇನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡ್ತಿದ್ದಾರಾ ? ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಕನ್ನಡಿಗರನ್ನು ಗುಲಾಮರನ್ನಾಗಿ ಮಾಡ್ತಿದ್ದಾರೆ; ಇವರೇನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡ್ತಿದ್ದಾರಾ ? ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಕಾಟಾಚಾರಕ್ಕಾಗಿ ಆಹ್ವಾನಿಸಿದ್ದಾರೆ. ಆದರೆ ಇದನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಕಾಟಾಚಾರದ ನಡೆ ಯಾರಿಗೆ ಅರ್ಥವಾಗಲ್ಲ ಅಂದುಕೊಂಡಿದ್ದಾರೆ?

ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಂಪೇಗೌಡರ ಪ್ರತಿಮೆ ಅನಾವರಣ ಬಿಜೆಪಿ ಕಾರ್ಯಕ್ರಮವಾಗಿದ್ದರೆ ನಮ್ಮ ಆಕ್ಷೇಪವಿರಲಿಲ್ಲ. ಆದರೆ ಅದು ಸರ್ಕಾರಿ ಕಾರ್ಯಕ್ರಮ ಅಂದಮೇಲೆ ಎಲ್ಲರನ್ನು ಆಹ್ವಾನಿಸುವುದು ಧರ್ಮ. ಮಾಜಿ ಪ್ರಧಾನಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸದೇ ಇರುವುದು ಸರ್ಕಾರ ಮಾಡುತ್ತಿರುವ ಅವಮಾನ. ಆಹ್ವಾನ ಪತ್ರ ಕೊಟ್ಟಿದ್ದೇವೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಯಾರಿಗೆ ಕೊಟ್ಟಿದ್ದಾರೆ? ಎಷ್ಟು ಹೊತ್ತಿಗೆ ಕೊಟ್ಟಿದ್ದಾರೆ. ಮಧ್ಯರಾತ್ರಿ 12:30ರ ಸುಮಾರಿಗೆ ದೇವೇಗೌಡರ ಮನೆ ಗೇಟ್ ಹೊರಗೆ ಸಿಬ್ಬಂದಿ ಬಳಿ ವ್ಯಕ್ತಿಯೊಬ್ಬರು ಆಹ್ವಾನ ಪತ್ರಿಕೆ ಕೊಟ್ಟು ತೆರಳಿದ್ದಾರೆ. ಇದು ಮಾಜಿ ಪ್ರಧಾನಿಯವರನ್ನು ಸರ್ಕಾರ ಆಹ್ವಾನ ನೀಡುವ ರೀತಿಯೇ? ಎಂದು ಪ್ರಶ್ನಿಸಿದ್ದಾರೆ.

ಕೇವಲ ಪ್ರತಿಮೆ ಅನಾವರಣ ಮಾಡೋದು, ಪುಷ್ಪಾರ್ಚನೆ ಮಾಡುವುದು ಮಾಡೋದಲ್ಲ. ರಾಜ್ಯದ ಜನರ ಬದುಕು ಕಟ್ಟಿಕೊಡುವಲ್ಲಿ ಬಿಜೆಪಿ ಪಾತ್ರವೇನು? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತಿದ್ದಾರಾ ಇವರು? ಪ್ರಧಾನಿ ಮೋದಿಯವರು ಬಂದು ಯಾವ ಸಂದೇಶ ಕೊಟ್ಟು ಹೋದರು? ರೈಲು, ವಿಮಾನ, ಟರ್ಮಿನಲ್ ಇದೆಲ್ಲ ಅಧಿಕಾರದಲ್ಲಿರುವ ಸರ್ಕಾರ ಮಾಡಬೇಕಾದ ಕೆಲಸಗಳು ಅದರಲ್ಲೇನು ವಿಶೇಷ? ರಾಜ್ಯ ಬಿಜೆಪಿ ಸರ್ಕಾರ ಕನ್ನಡದ ಅಸ್ಮಿತೆ ಬಗ್ಗೆ ನನಗೆ ಟ್ವೀಟ್ ಮಾಡಿದೆ. ಕನ್ನಡದ ಅಸ್ಮಿತೆ ಉಳಿಸಲು ಸರ್ಕಾರ ಏನು ಮಾಡಿದೆ? ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡ ಉಳಿಸುವ ಬದಲು ಕೇಂದ್ರದ ನಾಯಕರನ್ನು ಮೆಚ್ಚಿಸಲು ಹಿಂದಿ ಹೇರುತ್ತಿದೆ. ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.