ಚುನಾವಣಾ ಆಯುಕ್ತರನ್ನು ಭಾರಿ ಆತುರದಲ್ಲಿ ನೇಮಿಸಿದ್ದೇಕೆ?: ಒಕ್ಕೂಟ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಪ್ರಶ್ನೆ

ಚುನಾವಣಾ ಆಯುಕ್ತರನ್ನು ಭಾರಿ ಆತುರದಲ್ಲಿ ನೇಮಿಸಿದ್ದೇಕೆ?: ಒಕ್ಕೂಟ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಪ್ರಶ್ನೆ

ನಿವೃತ್ತ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ (ಅನೂಪ್ ಬರನ್ವಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಓರ್ಸ್) ನೇಮಕ ಮಾಡುವಲ್ಲಿ ಒಕ್ಕೂಟ ಸರ್ಕಾರವು “ಭಾರಿ ಆತುರ” ಪಡಿಸಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.

ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠವು, ಒಕ್ಕೂಟ ಸರ್ಕಾರವು ಕೇವಲ 24 ಗಂಟೆಗಳ ಅವಧಿಯಲ್ಲಿ ಗೋಯೆಲ್‌ ಅವರ ಮೌಲ್ಯಮಾಪನ ಮತ್ತು ಆಯ್ಕೆ ಮಾಡಲಾಗಿದೆ ಎಂಬುದನ್ನು ಗಮನಿಸಿದೆ.“ಅರುಣ್ ಗೋಯೆಲ್ ನೇಮಕಾತಿ ಕಡತವನ್ನು ನವೆಂಬರ್ 18 ರಂದು ಮುಂದೆ ತರಲಾಗಿದೆ. ಇದರ ನಂತರ ಹೆಸರುಗಳನ್ನು ಪರಿಶೀಲಿಸಲಾಗುತ್ತದೆ. ನಂತರ ಪ್ರಧಾನಿ ಬರುತ್ತಾರೆ… ಸಾಮಾನ್ಯವಾಗಿ ಇಷ್ಟು ತರಾತುರಿಯಲ್ಲಿ ನೇಮಕ ಮಾಡಲಾಗುತ್ತದೆಯೇ” ಎಂದು ನ್ಯಾಯಮೂರ್ತಿ ಜೋಸೆಫ್ ಅವರು ಒಕ್ಕೂಟ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಕೇಳಿದ್ದಾರೆ.

ಗೋಯೆಲ್ ಅವರ ನೇಮಕವನ್ನು ನವೆಂಬರ್ 18 ರಂದು ಒಂದೇ ದಿನದಲ್ಲಿ ಮಾಡಿದ್ದೀರಿ. ಈ ಬಗ್ಗೆಗಿನ ಕಡತವು ಅದನ್ನು ಸೂಚುಸುತ್ತಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಕಾರ್ಯಾಂಗವು ಅಧಿಕಾರ ಅನುಭವಿಸುತ್ತದೆ ಎಂಬ ಕಾರಣಕ್ಕೆ ಭಾರತದ ಸಂವಿಧಾನದ 324(2)ನೇ ವಿಧಿಯನ್ನು ಉಲ್ಲಂಘಿಸಿ ಚುನಾವಣಾ ಆಯುಕ್ತರ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಈ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.

ಗೋಯೆಲ್ ಅವರು ನವೆಂಬರ್ 18ರ ಶುಕ್ರವಾರದಂದು ತಮ್ಮ ಹಿಂದಿನ ಪೋಸ್ಟಿಂಗ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ನವೆಂಬರ್ 19 ರಂದು ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು ಮತ್ತು ನವೆಂಬರ್ 21 ರಂದು ಅಧಿಕಾರ ವಹಿಸಿಕೊಂಡಿದ್ದರು

ಭಾರತೀಯ ಚುನಾವಣಾ ಆಯೋಗ (ಇಸಿಐ)ದ ನೇಮಕಾತಿಗಳಿಗೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಬಾಕಿ ಇರುವಾಗ ಈ ನೇಮಕಾತಿಯನ್ನು ಮಾಡಲಾಗಿತ್ತು. ಹೀಗಾಗಿ ಗೋಯೆಲ್ ಅವರನ್ನು ಚುನಾವಣಾ ಆಯುಕ್ತವಾರಿ ನೇಮಿಸಿದ್ದಕ್ಕೆ ಸಂಬಂಧಿಸಿದ ಕಡತವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಬುಧವಾರ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ಒಕ್ಕೂಟ ಸರ್ಕಾರವು ಕಡತಗಳನ್ನು ಹಾಜರುಪಡಿಸಿದ್ದು, ಪೀಠವು ಇಂದು ಪರಿಶೀಲಿಸಲು ಮುಂದಾಯಿತು.

“ನಿಮ್ಮ ಮೊದಲ ಪುಟದ ಪ್ರಕಾರ, ಈ ಹುದ್ದೆಯು ಮೇ 15 ರಿಂದ ಖಾಲಿಯಾಗಿದೆ. ಮೇ ನಿಂದ ನವೆಂಬರ್‌ ತಿಂಗಳ ವರೆಗೆ ಕಾದು, ನವೆಂಬರ್‌ನಲ್ಲಿ ಎಲ್ಲವನ್ನೂ ಸೂಪರ್‌ಫಾಸ್ಟ್ ಆಗಿ ಮಾಡಬೇಕು ಎಂದು ಸರ್ಕಾರಕ್ಕೆ ಯಾಕೆ ಅನಿಸಿತು ಎಂದು ನಮಗೆ ಹೇಳಬಹುದೇ. ಎಲ್ಲಿ ಇಚ್ಛೆ ಇರುತ್ತದೋ ಅಲ್ಲಿ ದಾರಿ ಇರುತ್ತದೆ ಎಂದು ನಮಗೆ ತಿಳಿದಿದೆ” ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ಹೇಳಿದ್ದಾರೆ.