SC- STಗೆ ಸೇರ್ಪಡೆಗೊಳಿಸಲು ಇತರೆ ಸಮುದಾಯಗಳ ಒತ್ತಾಯ; ಪರಿಶೀಲಿಸಿ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ

SC- STಗೆ ಸೇರ್ಪಡೆಗೊಳಿಸಲು ಇತರೆ ಸಮುದಾಯಗಳ ಒತ್ತಾಯ; ಪರಿಶೀಲಿಸಿ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ

ಬೆಂಗಳೂರು, ಅ.11: ವಿವಿಧ ಸಮುದಾಯಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸುವಂತೆ ಒತ್ತಾಯ ಮಾಡುತ್ತಿದ್ದು, ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ತಜ್ಞರು ನೀಡುವ ಶಿಫಾರಸ್ಸುಗಳನ್ನು ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

''ಎಲ್ಲರಿಗೂ ಆಕಾಂಕ್ಷೆಗಳು ಇದ್ದೆ ಇರುತ್ತದೆ. ಸರ್ಕಾರ ಎ ಸ್.ಸಿ, ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ಕಾನೂನಾತ್ಮಕವಾಗಿ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ತಜ್ಞರೊಡನೆ ಸಮಾಲೋಚಿಸಲಾಗುವುದು'' ಎಂದರು.

ಪರವಾನಗಿ ಇಲ್ಲದ ಸಂಸ್ಥೆಗಳ ಮೇಲೆ ಕಠಿಣ ಕ್ರಮಕ್ಕೆ ಸೂಚನೆ: ಓಲಾ, ಊಬರ್ ಪರವಾನಗಿ ರದ್ದಾಗಿರುವ ಬಗ್ಗೆ ಸಾರಿಗೆ ಆಯುಕ್ತರೊಂದಿಗೆ ಮಾತನಾಡಿದ್ದು, ಯಾವುದೇ ಪರವಾನಗಿ ಇಲ್ಲದೆ ಯಾವ ಸಂಸ್ಥೆಯನ್ನೂ ನಡೆಸಬಾರದು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ ಎಂದರು.

ಗಂಧದಗುಡಿ ಬಿಡುಗಡೆಗೆ ಆಹ್ವಾನ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಬಿಡುಗಡೆಯ ಪೂರ್ವಭಾವಿ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮ ಉದ್ಘಾಟಿಸಲು ಆಮಂತ್ರಣ ನೀಡಿದರು. ರಾಘವೇಂದ್ರ ರಾಜ್ ಕುಮಾರ್ ಅವರೂ ಇದ್ದರು ಎಂದರು.