ಈತ ಗುಜರಾತ್ ಟೈಟನ್ಸ್ ಹಾಗೂ ಭಾರತಕ್ಕೆ ಆಸ್ತಿಯಾಗಬಲ್ಲ ಆಟಗಾರ: 2ನೇ ಗೆಲುವಿನ ಬಳಿಕ ಹಾರ್ದಿಕ್ ಹೇಳಿಕೆ

ಈತ ಗುಜರಾತ್ ಟೈಟನ್ಸ್ ಹಾಗೂ ಭಾರತಕ್ಕೆ ಆಸ್ತಿಯಾಗಬಲ್ಲ ಆಟಗಾರ: 2ನೇ ಗೆಲುವಿನ ಬಳಿಕ ಹಾರ್ದಿಕ್ ಹೇಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿಯೂ ಗುಜರಾತ್ ಟೈಟನ್ಸ್ ತಂಡದ ಗೆಲುವಿನ ಓಟ ಮುಂದುವರಿದಿದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಲಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದು ಯುವ ಆಟಗಾರ ಸಾಯಿ ಸುದರ್ಶನ್.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡಕ್ಕೆ ರನ್ ಬೆನ್ನಟ್ಟಲು ಆಸರೆಯಾಗಿದ್ದು ಸಾಯಿ ಸುದರ್ಶನ್. 48 ಎಸೆತಗಳಲ್ಲಿ 62 ರನ್ ಬಾರಿಸಿದ ಅವರು ಸಮಯೋಚಿತ ಪ್ರದರ್ಶನದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಅವರು ಅಜೇಯವಾಗುಳಿದು ಈ ಸಾಧನೆ ಮಾಡಿದ್ದಾರೆ. ಈ ಅದ್ಭುತ ಪ್ರದರ್ಶನದ ಕಾರಣಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದಿದೆ.

ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಳಿಕ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಾಯಿ ಸುದರ್ಶನ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಮುಂದಿನ ದಿನಗಳಲ್ಲಿ ತಮ್ಮ ಫ್ರಾಂಚೈಸಿಗೆ ಹಾಗೂ ಭಾರತ ತಂಡಕ್ಕೆ ಬಹಳ ದೊಡ್ಡ ಆಸ್ತಿಯಾಗಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ ಎಂದು ಬಣ್ಣಿಸಿದ್ದಾರೆ ಹಾರ್ದಿಕ್ ಪಾಂಡ್ಯ.

"ಆತ ಬಹಳ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆತನ ಪರಿಶ್ರಮದ ಪ್ರತಿಫಲವನ್ನು ನಾವಿಲ್ಲಿ ಕಾಣಬಹುದು. ಮುಂದಿನ ಎರಡು ವರ್ಷಗಳಲ್ಲಿ ಆತ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹಾಗೂ ಭಾರತ ತಂಡಕ್ಕೆ ಬಹಳ ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಈ ಪಂದ್ಯದಲ್ಲಿ ನಾಯತಕ ಹಾರ್ದಿಕ್ ಪಾಂಡ್ಯ ಕೇವಲ 5 ರನ್ ಮಾತ್ರಗಳಿಸಿ ವಿಫಲವಾದರು.

ಸಂಕಷ್ಟದಲ್ಲಿದ್ದಾಗ ಮೈದಾನಕ್ಕಿಳಿದ ಸಾಯಿ ಸುದರ್ಶನ್. ಅಂದಹಾಗೆ ಈ ಪಂದ್ಯದಲ್ಲಿ ಸಾಯಿ ಸುದರ್ಶನ್ ಬ್ಯಾಟಿಂಗ್‌ಗೆ ಇಳಿಯುವಾಗ ತಂಡ ಸಂಕಷ್ಟದಲ್ಲಿತ್ತು. ಡೆಲ್ಲಿ ವೇಗಿ ಆನ್ರಿಕ್ ನಾರ್ಕಿಯಾ ವೇಗದ ಬೌಲಿಂಗ್ ದಾಳಿಗೆ ಜಿಟಿ ತಂಡದ ಆರಂಭಿಕರಾದ ವೃದ್ಧಿಮಾನ್ ಸಾಹ ಹಾಗೂ ಶುಬ್ಮನ್ ಗಿಲ್ ದೊಡ್ಡ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದರು. ನಂತರ ನಾಯಕ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕಳೆದುಕೊಂಡ ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ವಿಜಯ್ ಶಂಕರ್ ಜೊತೆಗೆ ಅದ್ಭುತ ಜೊತೆಯಾಟವೊಂದರಲ್ಲಿ ಭಾಗಿಯಾದರು.

ಇನ್ನು ಅಂತಿಮ ಹಂತದಲ್ಲಿ ಜಿಟಿ ತಂಡಕ್ಕೆ ಅನುಭವಿ ಆಟಗಾರ ಡೇವಿಡ್ ಮಿಲ್ಲರ್ ಎಂದಿನ ಸ್ಪೋಟಕ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಡೇವಿಡ್ ಮಿಲ್ಲರ್ 16 ಎಸೆತಗಳಲ್ಲಿ 31 ರನ್‌ಗಳಿಸಿದ್ದು ಇದರ ಪರಿಣಾಮವಾಗಿ ಗುಜರಾತ್ ಟೈಟನ್ಸ್ ತಂಡ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಜಿಟಿ ತಂಡ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಂತಾಗಿದೆ.