ಕಾಂಗ್ರೆಸ್​ ಉಸಿರಾಡುವುದನ್ನು ನಿಲ್ಲಿಸಬೇಕಿದೆ, ಆ ಕೆಲಸವನ್ನ ನಾನು ಮಾಡೇ ಮಾಡ್ತೀನಿ: ಯಡಿಯೂರಪ್ಪ

ಕಾಂಗ್ರೆಸ್​ ಉಸಿರಾಡುವುದನ್ನು ನಿಲ್ಲಿಸಬೇಕಿದೆ, ಆ ಕೆಲಸವನ್ನ ನಾನು ಮಾಡೇ ಮಾಡ್ತೀನಿ: ಯಡಿಯೂರಪ್ಪ

ಮಂಡ್ಯ: ಕಾಂಗ್ರೆಸ್​ ಉಸಿರಾಡುವುದನ್ನು ನಿಲ್ಲಿಸಬೇಕಿದೆ. ಆ ಕೆಲಸವನ್ನ ನಾನು ಮಾಡೇ ಮಾಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಹೇಳಿದರು.

ಮಂಡ್ಯದಲ್ಲಿಂದು ಬಿಜೆಪಿ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲವೇ ಇಲ್ಲ.

ಕರ್ನಾಟಕದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಉಸಿರಾಡ್ತಿದೆ. ಅದನ್ನ ನಿಲ್ಲಿಸುವ ಕೆಲಸವನ್ನ ನಾನು ಮಾಡೇ ಮಾಡ್ತೀನಿ. ಅದಕ್ಕಾಗಿ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಂಜುಗೆ ಮತ ನೀಡಿ ಗೆಲ್ಲಿಸಿ ಎಂದು ಕೇಳಿದರು.

25 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. 25ರಲ್ಲಿ ಮಂಡ್ಯ ಸೇರಿದಂತೆ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡ್ತೇನೆ. ನೀವು ಸ್ವಾಗತ ಮಾಡಿದ ರೀತಿ ನೋಡಿದಾಗ ನನಗೆ ಆಶ್ಚರ್ಯ ಆಯ್ತು. ನಾನು ಬಂದಿರೋದು ಶಿವಮೊಗ್ಗಕ್ಕ ಅಥವಾ ಮಂಡ್ಯಕ್ಕ ಅನ್ನೋ ಅನುಮಾನ ಮೂಡಿತು ಎಂದರು.

ನಾರಾಯಣ ಗೌಡರ ಸಮ್ಮುಖದಲ್ಲಿ ಈ ಚುನಾವಣೆ ಗೆಲ್ಲಿಸಿ. ನನ್ನೊಟ್ಟಿಗೆ ರಾಜ್ಯದ ಎಲ್ಲಾ ನಾಯಕರನ್ನು ಕರೆ ತರುತ್ತೇನೆ. ಆ ಮೂಲಕ ಹುಟ್ಟೂರಲ್ಲಿ ಬಿಜೆಪಿ ಕಟ್ಟುವ ಕೆಲಸ ಮಾಡೋಣ. ಅದಕ್ಕಾಗಿ ಮಂಜು ಅವರನ್ನ ಗೆಲ್ಲಿಸಿ, ನಮಗೆ ಶಕ್ತಿ ನೀಡಿ. ಈಗಾಗಲೇ ಪ್ರತಿಯೊಬ್ಬರ ಮನೆಗೆ ಹೋಗಿ ಬಂದಿದ್ದಾರೆ. ಸ್ಥಳೀಯ ನಾಯಕರು, ಕಾರ್ಯಕರ್ತರು ಕೂಡ ಮತದಾರರ ಮನೆಗೆ ತೆರಳಿ ಮನವೊಲಿಸಿ. ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಮಂಜು ಗೆಲ್ಲಬೇಕು ಎಂದು ಕರೆ ನೀಡಿದರು.

ಮಂಡ್ಯದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಅಭ್ಯರ್ಥಿ ಇಲ್ಲದ ಕಡೆ ಜೆಡಿಎಸ್ ಬೆಂಬಲ ಕೇಳಿದ್ದೇವೆ ಅಷ್ಟೇ. ಅದರಲ್ಲಿ ಯಾವುದೇ ಗೊಂದಲ ಇಲ್ಲವೇ ಇಲ್ಲ. ಮಂಡ್ಯದಲ್ಲಂತೂ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ ಎಂದರು.