ಪಂಜಾಬ್‌ನಲ್ಲಿ 24 ಗಂಟೆಗಳಲ್ಲಿ ಎರಡು ಗುಂಪು ಹತ್ಯೆ: ಪವಿತ್ರ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ಯುವಕನ ಕೊಲೆ
ಪಂಜಾಬ್‌ನಲ್ಲಿ 24 ಗಂಟೆಗಳಲ್ಲಿ ಎರಡು ಗುಂಪು ಹತ್ಯೆ: ಪವಿತ್ರ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ಯುವಕನ ಕೊಲೆ
ಪಂಜಾಬ್‌ನ ಅಮೃತಸರ ಸ್ವರ್ಣ ಮಂದಿರದಲ್ಲಿ ಧಾರ್ಮಿಕ ಚಟುವಟಿಕೆಗೆ ಅಪಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಘಟನೆ ಬೆನ್ನಲ್ಲೇ ಭಾನುವಾರ ನಸುಕಿನಲ್ಲಿ ಕಪುರ್ತಲಾ ಜಿಲ್ಲೆಯಲ್ಲಿ ಮತ್ತೊಂದು ಗುಂಪು ಹತ್ಯೆ ವರದಿಯಾಗಿದೆ.
ಹೊಸದಿಲ್ಲಿ: ಪಂಜಾಬ್‌ನಲ್ಲಿ 24 ಗಂಟೆಗಳ ಅವಧಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಇಬ್ಬರನ್ನು ಹೊಡೆದು ಸಾಯಿಸಿದ ಎರಡು ಪ್ರತ್ಯೇಕ ಎದೆನಡುಗಿಸುವ ಘಟನೆಗಳು ನಡೆದಿವೆ. ಸ್ವರ್ಣಮಂದಿರದಲ್ಲಿ ನಡೆದ ಅಮಾನವೀಯ ಘಟನೆಯ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕಪುರ್ತಲಾ ಜಿಲ್ಲೆಯ ನಿಜಾಂಪುರ ಗ್ರಾಮದ ನಿವಾಸಿಗಳು ಭಾನುವಾರ ನಸುಕಿನಲ್ಲಿ ಸ್ಥಳೀಯ ಗುರುದ್ವಾರ ಒಂದರಲ್ಲಿ ವ್ಯಕ್ತಿಯೊಬ್ಬನನ್ನು ಹಿಡಿದಿದ್ದಾರೆ. ಬೆಳಿಗ್ಗೆ 4 ಗಂಟೆ ವೇಳೆಗೆ ಆತ (ಸಿಖ್ಖರ ಪವಿತ್ರ ಧ್ವಜ) ಅನ್ನು ಅಪವಿತ್ರಗೊಳಿಸುವುದು ಕಂಡುಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆದರೆ ಗುಂಪುಗಳು ಆತನನ್ನು ತಮ್ಮ ಮುಂದೆಯೇ ಗುರುದ್ವಾರದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದವು. ಇದಕ್ಕೆ ಪೊಲೀಸರು ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಜನರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಆಗ ಆ ಶಂಕಿತನನ್ನು ಹತ್ಯೆ ಮಾಡಲಾಗಿದೆ.
ಗುರುದ್ವಾರದ ಕಾಂಪೌಂಡ್ ಒಳಗೆ ಪೊಲೀಸರು ಶಂಕಿತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆಗ ಪೊಲೀಸರು ಮತ್ತು ಸಿಖ್ ಗುಂಪುಗಳ ನಡುವೆ ಕಿತ್ತಾಟ ಮುಂದುವರಿದಿತ್ತು. ಆತನನ್ನು ಪೊಲೀಸರು ತಮ್ಮೊಂದಿಗೆ ಕರೆದುಕೊಂಡು ಹೋಗಲು ಗುಂಪುಗಳು ಅವಕಾಶ ನೀಡಲಿಲ್ಲ. ಜನರು ತಮ್ಮ ಕೈಗಳಿಗೆ ಬಡಿಗೆಗಳನ್ನು ತೆಗೆದುಕೊಂಡು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಂಕಿತನನ್ನು ಪೊಲೀಸರು ಬಳಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.
ಗುರುದ್ವಾರದ ಮೇಲ್ವಿಚಾರಕ ಅಮರ್ಜಿತ್ ಸಿಂಗ್, ತಾವು ದೈನಂದಿನ ಪ್ರಾರ್ಥನೆಗಾಗಿ ಬೆಳಗಿನ ಜಾವ 4 ಗಂಟೆಗೆ ಬಂದಾಗ ಯುವಕನೊಬ್ಬ ನಿಶಾನ್ ಸಾಹಿಬ್ ಅನ್ನು ಅಗೌರವಿಸುತ್ತಿರುವುದನ್ನು ಕಂಡಿದ್ದಾಗಿ ತಿಳಿಸುವ ವಿಡಿಯೋ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. 'ನಾನು ಅವನಿಗೆ ಎದುರಾದಾಗ ಕತ್ತಲಿನಲ್ಲಿ ತಪ್ಪಿಸಿಕೊಂಡು ಪರಾರಿಯಾದ. ಆದರೆ ಕೆಲವು ಸಮಯದ ಬಳಿಕ ಆತನನ್ನು ಹಿಡಿದೆವು. ಅವನನ್ನು ದಿಲ್ಲಿಯಿಂದ ಕಳುಹಿಸಲಾಗಿತ್ತು. ಅವನ ಸಹೋದರಿಯನ್ನು ಕೂಡ ಇದೇ ರೀತಿ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಬೇರೆ ಸ್ಥಳದಲ್ಲಿ ಕೊಲ್ಲಲಾಗಿದೆ' ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೃತಸರ ಸ್ವರ್ಣಮಂದಿರದಲ್ಲಿ ಪವಿತ್ರ ಧಾರ್ಮಿಕ ಗ್ರಂಥಕ್ಕೆ ಅಪಚಾರ ಎಸಗಿದ ಆರೋಪದಲ್ಲಿ ಜನರು ಸಾಮೂಹಿಕ ಹಲ್ಲೆ ನಡೆಸಿ ಯುವಕನೊಬ್ಬನನ್ನು ಹತ್ಯೆ ಮಾಡಿದ್ದರು. ಶುಕ್ರವಾರ ರಾತ್ರಿ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಎದುರು ಇರಿಸಿದ್ದ ಖಡ್ಗವನ್ನು ಎತ್ತಿಕೊಳ್ಳಲು ಮುಂದಾಗಿದ್ದ. ಇದರಿಂದ ಉದ್ರಿಕ್ತರಾದ ಜನರು ಆತನನ್ನು ಥಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ದಿಲ್ಲಿ ಗಡಿಯ ಹರ್ಯಾಣದ ಭಾಗದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ಸ್ಥಳದ ಸಮೀಪ ಕೆಲವು ತಿಂಗಳ ಹಿಂದೆ ಗುಂಪುಹತ್ಯೆಯೊಂದು ನಡೆದಿತ್ತು. ಧಾರ್ಮಿಕ ಗ್ರಂಥಕ್ಕೆ ಅಪಚಾರ ಎಸಗಿದ್ದಕ್ಕೆ ಆಕ್ರೋಶಗೊಂಡು ಈ ಭೀಕರ ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.