'ಕಾಂತಾರ' ಚಿತ್ರಕ್ಕೆ ರಿಷಭ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?
ಬೆಂಗಳೂರು: ರಿಷಭ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ 'ಕಾಂತಾರ' ಚಿತ್ರವು ಈಗಾಗಲೇ ಬಾಕ್ಸ್ಆಫೀಸ್ ಧೂಳೀಪಟ ಮಾಡುವುದರ ಜತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವ ಮೂಲಕ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ.
ಈ ಮಧ್ಯೆ, ಚಿತ್ರದ ಬಜೆಟ್ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆಯೊಂದು ಶುರುವಾಗಿದೆ. ಮೂಲಗಳ ಪ್ರಕಾರ, ಚಿತ್ರದ ಬಜೆಟ್ 16 ಕೋಟಿ ರೂ.ಗಳಾಗಿದ್ದು, ಅದರಲ್ಲಿ ರಿಷಭ್ ಶೆಟ್ಟಿ ಅವರ ಸಂಭಾವನೆಯೇ ಕಾಲು ಭಾಗದಷ್ಟಿದೆ ಎಂದು ಹೇಳಲಾಗಿದೆ.
ಹೌದು, ಈ ಚಿತ್ರದ ಕಥೆ-ಚಿತ್ರಕಥೆ, ನಟನೆ ಮತ್ತು ನಿರ್ದೇಶನಕ್ಕೆ ರಿಷಭ್ ಶೆಟ್ಟಿ ನಾಲ್ಕು ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ನಟ ಕಿಶೋರ್ ಅವರಿಗೆ ಒಂದು ಕೋಟಿ ರೂ.ಗಳನ್ನು ಸಂಭಾವನೆಯನ್ನಾಗಿ ನೀಡಲಾಗಿದೆಯಂತೆ. ಇನ್ನು, ಅಚ್ಯುತ್ ಕುಮಾರ್ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಿಕ್ಕ ಬಜೆಟ್ ಚಿತ್ರದ ಮೇಕಿಂಗ್, ಸಂಭಾವನೆ ಮತ್ತು ಪ್ರಚಾರಕ್ಕೆ ಖರ್ಚಾಗಿದೆಯಂತೆ.
ಮೂಲಗಳ ಪ್ರಕಾರ, ರಿಷಭ್ ಶೆಟ್ಟಿ ಅವರ ಕೆಲಸದಿಂದ ಖುಷಿಯಾಗಿರುವ ನಿರ್ಮಾಪಕರು ಅವರಿಗೆ ಸಂಭಾವನೆ ಜತೆಗೆ ಲಾಭದಲ್ಲಿ ಒಂದಿಷ್ಟು ಪರ್ಸೆಂಟ್ ಹಣವನ್ನು ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಪರ್ಸೆಂಟೇಜ್ ಎಷ್ಟು ಮತ್ತು ಅದನ್ನೂ ಸೇರಿಸಿದರೆ, 'ಕಾಂತಾರ' ಚಿತ್ರದಿಂದ ರಿಷಭ್ ಶೆಟ್ಟಿ ಎಷ್ಟು ಗಳಿಸಿದಂತಾಗುತ್ತದೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕಿದೆ.