ಅಭಿಮಾನಿ ಆತ್ಮಹತ್ಯೆ; ಸಂತಾಪ ಸೂಚಿಸಿದ ಬಿ. ಎಸ್. ಯಡಿಯೂರಪ್ಪ

ಅಭಿಮಾನಿ ಆತ್ಮಹತ್ಯೆ; ಸಂತಾಪ ಸೂಚಿಸಿದ ಬಿ. ಎಸ್. ಯಡಿಯೂರಪ್ಪ

ಚಾಮರಾಜನಗರ, ಜುಲೈ 27; ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಳಿಕ ಯಡಿಯೂರಪ್ಪ ಅಭಿಯಾನಿಯೊಬ್ಬರು ಗುಂಡ್ಲುಪೇಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ನಿವಾಸಿ ರಾಜಪ್ಪ (ರವಿ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಮಂಗಳವಾರ ಟ್ವೀಟ್ ಮೂಲಕ ಮೃತಪಟ್ಟ ಅಭಿಮಾನಿಗೆ ಸಂತಾಪ ಸೂಚಿಸಿದ್ದಾರೆ.

ರಾಜಪ್ಪ ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ. ರಾಜಕಾರಣದಲ್ಲಿ ಏರಿಳಿತಗಳು ಸಹಜ, ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು. ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಯಡಿಯೂರಪ್ಪ, 'ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ' ಎಂದು ತಿಳಿಸಿದ್ದಾರೆ.

ಸೋಮವಾರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ. ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದರು. ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದರು. ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಅವರು ಮುಂದುವರೆಯಲಿದ್ದಾರೆ.

ರಾಜೀನಾಮೆ ಬಳಿಕ ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿದ್ದ ಯಡಿಯೂರಪ್ಪ, 'ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಶ್ರೀ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ. ಪಿ. ನಡ್ಡಾ, ಗೃಹ ಸಚಿವ ಶ್ರೀ ಅಮಿತ್ ಶಾ ರವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ' ಎಂದು ಹೇಳಿದ್ದರು.

ಯಡಿಯೂರಪ್ಪ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರ ನಾಲ್ಕು ಬಾರಿಯೂ ಪೂರ್ಣಾವಧಿ ಪೂರೈಸಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಯಡಿಯೂರಪ್ಪ ರಾಜೀನಾಮೆ ಬಳಿಕ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ಸಹ ನಡೆದಿದ್ದವು.