೩ ದಿನ ಸಂಕಲ್ಪ ಯಾತ್ರೆಯಲ್ಲಿ ಅರುಣ್‌ಸಿಂಗ್

ಬೆಂಗಳೂರು,ಅ.೧೪- ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರು ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯ ಬಿಜೆಪಿ ನಾಯಕರ ಜೊತೆ ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ನಡೆಸುವರು.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ನೇತೃತ್ವದಲ್ಲಿ ಮೂರು ದಿನಗಳ ಹಿಂದೆ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಕಳೆದ ಮೂರು ದಿನಗಳಿಂದ ಈ ಇಬ್ಬರು ನಾಯಕರು ರಾಯಚೂರು, ಬಳ್ಳಾರಿ, ಕುಷ್ಠಗಿ ಜಿಲ್ಲೆಗಳಲ್ಲಿ ಜನಸಂಕಲ್ಪ ಯಾತ್ರೆಯ ಸಮಾವೇಶಗಳಲ್ಲಿ ಭಾಗಿಯಾಗಿದ್ದರು.
ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಚಿಕ್ಕೋಡಿಗಳಲ್ಲಿ ಜನಸಂಕಲ್ಪ ಯಾತ್ರೆಯ ಸಮಾವೇಶಗಳು ನಡೆಯಲಿದ್ದು, ಈ ಸಮಾವೇಶಗಳಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ರಾಜ್ಯ ನಾಯಕರುಗಳ ಜತೆ ಭಾಗಿಯಾಗಲಿದ್ದಾರೆ.ರಾಜ್ಯ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಅರುಣ್‌ಸಿಂಗ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ಇಂದು ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ, ನಾಳೆ ಹಾವೇರಿ ಜಿಲ್ಲೆಗೆ ತೆರಳಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡುವರು. ಅ. ೧೬ ರಂದು ಹುಬ್ಬಳ್ಳಿ, ಧಾರವಾಡದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ, ಅ. ೧೭ ರಂದು ಚಿಕ್ಕೋಡಿಯಲ್ಲಿ ನಡೆಯುವ ಪಕ್ಷದ ಸಮಾವೇಶದಲ್ಲಿ ಭಾಗಿಯಾಗಿ ಅಂದು ಬೆಳಗಾವಿಯಿಂದ ದೆಹಲಿಗೆ ವಾಪಸ್ಸಾಗುವರು.