ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನಕ್ಕೆ ಗಣ್ಯರ ಕಂಬನಿ

ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನಕ್ಕೆ ಗಣ್ಯರ ಕಂಬನಿ

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಗಣ್ಯರು ಕಂಬನಿ ಮಿಡಿದಿದ್ದಾರೆ.

'ನಾನು ಪದಗಳನ್ನು ಮೀರಿ ದುಃಖಿತನಾಗಿದ್ದೇನೆ. ಕಲ್ಯಾಣ್ ಸಿಂಗ್ ಜಿ . ರಾಜನೀತಿಜ್ಞ, ಹಿರಿಯ ಆಡಳಿತಗಾರ, ತಳಮಟ್ಟದ ನಾಯಕ ಮತ್ತು ಮಹಾನ್ ಮಾನವ. ಉತ್ತರ ಪ್ರದೇಶದ ಅಭಿವೃದ್ಧಿಗೆ ಅವರು ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗುತ್ತಾರೆ. ಅವರ ಪುತ್ರ ರಾಜವೀರ್ ಸಿಂಗ್ ಅವರನ್ನು ಮಾತನಾಡಿಸಿ ಸಾಂತ್ವನ ಹೇಳಿರುವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ನಿಧನದಿಂದ ಅತೀವ ನೋವಾಗಿದೆ. ಅವರು ರಾಷ್ಟ್ರೀಯವಾದಿ ಮತ್ತು ಅನುಕರಣೀಯ ನಾಯಕನಾಗಿದ್ದು, ಜನರ ಸೇವೆಗೆ ಬದ್ಧವಾಗಿದ್ದರು. ಅವರ ಅನುಯಾಯಿಗಳು ಮತ್ತು ಕುಟುಂಬದ ಜೊತೆ ನಾನಿದ್ದೇನೆ' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

'ಕಲ್ಯಾಣ್ ಸಿಂಗ್ ಅವರ ನಿಧನದಿಂದ ನಾನು ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಜನರಿಗೆ ನೋವಾಗಿದೆ. ಅವರು ಹಿರಿಯ ಬಿಜೆಪಿ ನಾಯಕ ಮತ್ತು ರಾಮಜನ್ಮಭೂಮಿ ಚಳವಳಿಯ ಹೀರೊ. ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಹಲವು ವರ್ಷಗಳ ಕಾಲ ಹೋರಾಡಿದ್ದರು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

'ಕಲ್ಯಾಣ್ ಸಿಂಗ್ ನಿಧನಕ್ಕೆ ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ 23ರ ಸಂಜೆ ನರೋರಾದ ಗಂಗಾ ತೀರದಲ್ಲಿ ನೆರವೇರಿಸಲಾಗುತ್ತದೆ. ಆಗಸ್ಟ್ 23 ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ' ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.