ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ - ಸಚಿವ ಸಿಸಿ ಪಾಟೀಲ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸೋ ಸಂಬಂಧ, ಪ್ರತಿಭಟನೆ ಮುಂದಾಗಿದ್ದಂತ ಜಯ ಮೃತ್ಯುಂಜಯ ಸ್ವಾಮಿಯೊಂದಿಗೆ ಸಚಿವ ಸಿಸಿ ಪಾಟೀಲ್ ಸಂಧಾನ ಯಶಸ್ವಿಯಾಗಿದೆ. ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ ಎಂಬುದಾಗಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಂಚಮ ಸಾಲಿ ಸಮುದಾಯಕ್ಕೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. 2ಎ ಮೀಸಲಾತಿಗಾಗಿ ಎಲ್ಲರೂ ಹೋರಾಟ ಮಾಡಿದ್ದರ ಫಲವಾಗಿ, ಸ್ವಲ್ಪ ದಿನಗಳಲ್ಲೇ ಸಿಹಿಸುದ್ದಿ ಸಿಗಲಿದೆ ಎಂದರು. ಕೂಡಲ ಸಂಗಮ ಪೀಠ ನಮ್ಮೆಲ್ಲರನ್ನು ಒಗ್ಗೂಡಿಸಿದೆ. 2ಎ ಮೀಸಲಾತಿ ಸಂಬಂಧ ಸಿಎಂ ಜೊತೆಗೆ ನಾನು, ಶಾಸಕ ಯತ್ನಾಳ್ ಮಾತನಾಡಿದ್ದೇವೆ. ಸಿಎಂ ಬೊಮ್ಮಾಯಿಯವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ಪಂಚಮ ಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ವಿಚಾರವಾಗಿ ಕೊಂಚ ಕಾನೂನು ತೊಡಕುಗಳಿವೆ. ವಿಳಂಬವಾದರೂ ಉತ್ತಮ ಫಲಿತಾಂಶ ಬರುವ ನಂಬಿಕೆ ಇದೆ. ಹೀಗಾಗಿ ಪ್ರತಿಭಟನೆ ಮಾಡದಂತೆ ಸ್ವಾಮೀಜಿಯವರಿಗೆ ಮನವಿ ಮಾಡಿರೋದಾಗಿ ಹೇಳಿದರು.