ಟೆಸ್ಟ್ ಕ್ರಿಕೆಟ್: ಡಕೆಟ್, ಬ್ರೂಕ್ಸ್ ಮಿಂಚಿನ ಬ್ಯಾಟಿಂಗ್
ಮೌಂಟ್ ಮಾಂಗನೆ (ಎಎಫ್ಪಿ):ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ಸ್ ಅವರ ಚೆಂದದ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಎದುರು ಗುರುವಾರ ಆರಂಭವಾದ ಟೆಸ್ಟ್ನ ಮೊದಲ ದಿನ ಉತ್ತಮ ಮೊತ್ತ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡಕ್ಕೆ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಯಂಡರ್ಸನ್ ಪೆಟ್ಟುಕೊಟ್ಟರು.
ಇಂಗ್ಲೆಂಡ್ ತಂಡವು ಗಳಿಸಿರುವ 325 ರನ್ಗಳ ಮೊತ್ತವನ್ನು ಚುಕ್ತಾಗೊಳಿಸಲು ಕಿವೀಸ್ಗೆ ಇನ್ನೂ 288 ರನ್ಗಳ ಅಗತ್ಯವಿದೆ.
ಬೇ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಿಮ್ ಸೌಥಿ ಹಾಗೂ ನೀಲ್ ವಾಗ್ನರ್ ಪ್ರಮುಖ ವಿಕೆಟ್ಗಳನ್ನು ಗಳಿಸುವ ಮೂಲಕ ಕಿವೀಸ್ ಇನಿಂಗ್ಸ್ಗೆ ಬಲ ತುಂಬುವ ಪ್ರಯತ್ನ ಮಾಡಿದರು.
ಆದರೆ, ಆರಂಭಿಕ ಬ್ಯಾಟರ್ ಬೆನ್ ಡಕೆಟ್ (84; 68ಎ, 4X14) ಹಾಗೂ ಬ್ರೂಕ್ (89; 81ಎ, 4X15, 6X1) ಟಿ20 ಮಾದರಿಯ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡದ ಮೊತ್ತ ಏರಿತು. ಪೊಪ್ ಹಾಗೂ ಫೋಕ್ಸ್ ಕೂಡ ಕ್ರಮವಾಗಿ 42 ಮತ್ತು 38 ರನ್ ಗಳಿಸಿ ಕಾಣಿಕೆ ಕೊಟ್ಟರು. ಇನ್ನೂ ಒಂದು ವಿಕೆಟ್ ಬಾಕಿಯಿದ್ದಾಗಲೇ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್; ಇಂಗ್ಲೆಂಡ್: 58.2 ಓವರ್ಗಳಲ್ಲಿ 9ಕ್ಕೆ325 ಡಿಕ್ಲೇರ್ಡ್ (ಬೆನ್ ಡಕೆಟ್ 84, ಒಲಿ ಪೊಪ್ 42, ಹ್ಯಾರಿ ಬ್ರೂಕ್ 89, ಫೋಕ್ಸ್ 38, ಟಿಮ್ ಸೌಥಿ 71ಕ್ಕೆ2, ನೀಲ್ ವಾಗ್ನರ್ 82ಕ್ಕೆ4, ಕಗ್ಲೇಜಿನ್ 80ಕ್ಕೆ2) ನ್ಯೂಜಿಲೆಂಡ್ 18 ಓವರ್ಗಳಲ್ಲಿ 3 ವಿಕೆಟ್ಗಳಿಗೆ 37 (ಡೆವೊನ್ ಕಾನ್ವೆ ಬ್ಯಾಟಿಂಗ್ 17, ಜೇಮ್ಸ್ ಆಯಂಡರ್ಸನ್ 10ಕ್ಕೆ2)