ಕಡಬ: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ
ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಗಳಲ್ಲಿ ಗಂಡು ಕಾಡಾನೆಯನ್ನು ಕೊನೆಗೂ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಕಳೆದ ಎರಡು ದಿನಗಳಲ್ಲಿ ವಿಫಲವಾದ ಕಾರ್ಯಾಚರಣೆ ಕೊನೆಗೂ ಮೂರನೇಯ ದಿನ ಯಶಸ್ಸು ಕಂಡಿದೆ.
ಮೂರು ದಿನಗಳ ಕಾರ್ಯಾಚರಣೆ ಹೇಗೆ..
ಘಟನೆ ನಡೆದ ದಿನದಂದೇ ದುಬಾರೆ ಆನೆ ಕ್ಯಾಂಪ್‌ನಿಂದ ಮತ್ತು ಮತ್ತಿಗೋಡು ಎಂಬಲ್ಲಿಂದ ಅಭಿಮನ್ಯು ಆನೆ ಸೇರಿದಂತೆ ತರಬೇತಿ ಪಡೆದ 5 ಆನೆಗಳನ್ನು ತರಲಾಗಿತ್ತು. ಬಳಿಕ ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ಟೆಂಪರೇಚರ್ ಟೆಕ್ನೊಲಾಜಿ ಬಳಸಿ ಮತ್ತು ಆನೆ ಟ್ಯ್ರಾಕರ್ಸ್ ಮೂಲಕ ಕಾಡಾನೆಯ ಪತ್ತೆ ಕಾರ್ಯ ಆರಂಭವಾಗಿತ್ತು. ರೆಂಜಿಲಾಡಿಯ ತುಂಬೆ ರಕ್ಷಿತಾರಣ್ಯದಲ್ಲಿ ಬಂದಿಳಿದ ಸಾಕಾನೆಗಳು ಮತ್ತು ತಜ್ಞ ವೈದ್ಯರ ತಂಡ ನೂಜಿಬಾಳ್ತಿಲ ಸಮೀಪದ ಪುತ್ಯೆ ಎಂಬಲ್ಲಿಂದ ಕಾರ್ಯಾಚರಣೆ ಆರಂಭಿಸಿತು. ಆದರೆ ಅಂದಿನ ಪ್ರಯತ್ನ ಫಲ ನೀಡಲಿಲ್ಲ. ಮತ್ತೆ ಮರ್ಧಾಳ ಸಮೀಪದ ಅಜನ ಪ್ರದೇಶದಲ್ಲಿ ಕಾಡಾನೆ ಪತ್ತೆಯಾದವು. ಆದರೆ ಅಲ್ಲೂ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ಸಫಲವಾಗಲಿಲ್ಲ. ಮತ್ತೆ ಮೂರನೇ ದಿನವಾದ ನಿನ್ನೆ ಸಂಜೆ ಸುಂಕದಕಟ್ಟೆ ಕೊಂಬಾರು ರಸ್ತೆಯ ಮಂಡೇಕರ ಭಾಗದಲ್ಲಿ ಕಾಡಾನೆ ಪತ್ತೆಯಾದವು. ಸಂಜೆ ವೇಳೆಗೆ ಇಲ್ಲಿಯೂ ಪ್ರಯತ್ನ ವಿಫಲವಾಗುವ ಹಂತಕ್ಕೆ ತಲುಪಿತು. ಆದರೆ ಹಟ ಬಿಡದ ಡಿಎಫ್‌ಓ ದಿನೇಶ್ ಒಳಗೊಂಡ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಮತ್ತು ಡಾಕ್ಟರ್ ಮುಜೀಬ್ ಅವರ ತಂಡ ಹಾಗೂ ಆನೆ ಟ್ಯ್ರಾಕರ್ಸ್ ತಂಡಗಳು ಮುಖ್ಯ ರಸ್ತೆಯಿಂದ ಸುಮಾರು ಐದು ಕಿಮೀ ಅಂತರದ ದಟ್ಟ ಅರಣ್ಯದ ಒಳಗಡೆ ಕಾಡಾನೆಯೊಂದನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿದರು. ತಕ್ಷಣವೇ ಕಾಡಾನೆ ಹಿಡಿಯಲು ನೈಪುಣ್ಯತೆ ಹೊಂದಿರುವ ಅಭಿಮನ್ಯು ಆನೆಯೊಂದಿಗೆ ಇತರ ನಾಲ್ಕು ಸಾಕಾನೆಗಳು ಸ್ಥಳಕ್ಕೆ ತೆರಳಿ ಕಾಡಾನೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ರಸ್ತೆ ಸಮೀಪಕ್ಕೆ ಎಳೆದುಕೊಂಡು ಬರಲಾಯಿತು. ಆ ಬಳಿಕ ಕ್ರೇನ್ ಸಹಾಯದಿಂದ ಕಾಡಾನೆಯನ್ನು ಲಾರಿ ಮೇಲೆ ಅಳವಡಿಸಲಾದ ಕಬ್ಬಿಣದ ಗೂಡಿನ ಒಳಗೆ ಲಾಕ್ ಮಾಡಿ ಇಳಿಸಾಯಿತು ಕೊಡಗು ಜಿಲ್ಲೆಯ ಮತ್ತಿಗೋಡು ಎಲಿಫೆಂಟ್ ಕ್ಯಾಂಪ್‌ಗೆ ಸಾಗಿಸಲಾಯಿತು.