ಲಿಖಿತ ಭರವಸೆ ಕೊಟ್ಟರೆ ಮಾತ್ರ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್

ಲಿಖಿತ ಭರವಸೆ ಕೊಟ್ಟರೆ ಮಾತ್ರ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್

ಕದ ಸರ್ಕಾರಿ ನೌಕರರು ಮಾರ್ಚ್ 1ರಿಂದ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದು, ಮುಷ್ಕರದ ಕರೆ ವಾಪಸ್ ಪಡೆಯಲು ಸರ್ಕಾರ ಲಿಖಿತವಾಗಿ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. "7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಮಾರ್ಚ್ 1ರಿಂದ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ವಾಪಸ್ ಪಡೆದುಕೊಳ್ಳಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಸರ್ಕಾರದ ಮುಂದೆ ಈಗಾಗಲೇ ಜುಲೈ 1, 2022ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು. ಎನ್‌ಪಿಎಸ್ ರದ್ದುಗೊಳಿಸಬೇಕು, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ. ಬಜೆಟ್‌ ಭಾಷಣದಲ್ಲಿ 7ನೇ ವೇತನ ಆಯೋಗದ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾವನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

7ನೇ ವೇತನ ಆಯೋಗ ಸಿ. ಎಸ್. ಷಡಾಕ್ಷರಿ ಮಾತನಾಡಿ, "7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಹಿಂದಿನಿಂದಲೂ ಒತ್ತಾಯಿಸುತ್ತಾ ಬರಲಾಗಿದೆ. 2023-4ನೇ ಸಾಲಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಹುಸಿಯಾಗಿದೆ. ಆದ್ದರಿಂದ ನೌಕರರು ಅನಿವಾರ್ಯವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ಮುಂದಾಗಿದ್ದೇವೆ" ಎಂದರು.

ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ ತಾಲ್ಲೂಕು ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ತನಕ ಎಲ್ಲಾ ನೌಕರರು ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಬೇಡಿಕೆಗಳು ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ಕಾರದ ಮುಂದೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ದಿನಾಂಕ 01-07-2022 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ 40 ಪಿಟ್‍ಮೆಂಟ್ ಸೌಲಭ್ಯವನ್ನು ದಿನಾಂಕ 01-07-2022 ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸುವುದು ಎಂದು ಒಂದು ಬೇಡಿಕೆ ಇಟ್ಟಿದೆ.

ರಾಜ್ಯದ ಎನ್. ಪಿ. ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್. ಪಿ. ಎಸ್. ನೌಕರರನ್ನು ಓ. ಪಿ. ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು 2ನೇ ಬೇಡಿಕೆಯನ್ನು ಮುಂದಿಟ್ಟಿದೆ.

ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ 2023-24ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಅವರು ವೇತನ ಆಯೋಗದ ವಿಷಯ ಪ್ರಸ್ತಾಪ ಮಾಡಿದ್ದಾರೆ.

ರಾಜ್ಯ ಸರ್ಕಾರ ರಚನೆ ಮಾಡಿರುವ 7ನೇ ವೇತನ ಆಯೋಗಕ್ಕೆ ಮಾರ್ಚ್ ಅಂತ್ಯದೊಳಗೆ ಮಧ್ಯಂತರ ವರದಿ ಪಡೆದು ಜಾರಿಗೊಳಿಸಲು ಬದ್ಧವಾಗಿದ್ದೇವೆ. ಈಗಾಗಲೇ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆ ಮಾಡಿದ್ದೇವೆ. ಆಯೋಗದ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಹಣವನ್ನೂ ಹೊಂದಿಸಿ ಇಡಲಾಗಿದೆ. ಮಾರ್ಚ್ ವೊಳಗೆ ಮಧ್ಯಂತರ ವರದಿಯನ್ನು ನೀಡುವಂತೆ ಸೂಚಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

7ನೇ ವೇತನ ಆಯೋಗ ನೀಡುವ ಮಧ್ಯಂತರ ವರದಿ ಆಧರಿಸಿ, ಅವಲೋಕಿಸಿ 2023-24ನೇ ಸಾಲಿನಿಂದಲೇ ಜಾರಿಗೊಳಿಸಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಎನ್. ಪಿ. ಎಸ್. ರದ್ದುಗೊಳಿಸಿ, ಹಳೇ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸುವ ಕುರಿತು ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಆದ್ದರಿಂದ ಕರ್ನಾಟಕದ ಸರ್ಕಾರಿ ನೌಕರರು ಮಾರ್ಚ್ 1ರಿಂದ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ನೌಕರರು ಕರ್ತವ್ಯಕ್ಕೆ ಗೈರಾದರೆ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಜನರು ಸಂಕಷ್ಟ ಅನುಭವಿಸಲಿದ್ದಾರೆ.