ಜನರ ಭಾರಿ ವಿರೋಧ ಮತ್ತು ಹೋರಾಟದ ನಡುವೆಯು ಸುರತ್ಕಲ್‌‌ ಟೋಲ್‌ ಪ್ಲಾಜಾ ಹೆಜಮಾಡಿಗೆ ಶಿಫ್ಟ್‌‌!

ಜನರ ಭಾರಿ ವಿರೋಧ ಮತ್ತು ಹೋರಾಟದ ನಡುವೆಯು ಸುರತ್ಕಲ್‌‌ ಟೋಲ್‌ ಪ್ಲಾಜಾ ಹೆಜಮಾಡಿಗೆ ಶಿಫ್ಟ್‌‌!

ಜನರ ಭಾರಿ ವಿರೋಧ ಮತ್ತು ಹೋರಾಟದ ನಡುವೆಯು ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಗೇಟ್‌‌‌ಗೆ ವಿಲೀನ ಮಾಡಿದ್ದು, ಅಲ್ಲಿ ಸಂಗ್ರಹಿಸುವ ಟೋಲ್‌ ದರಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗುರುವಾರ ಪ್ರಕಟಿಸಿದೆ. ಅದರಂತೆ, ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಎಲ್ಲಾ ವಾಹನಗಳು ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುರತ್ಕಲ್ ಪ್ಲಾಜಾದ ಟೋಲ್‌ ಅನ್ನು ಒಟ್ಟು ಸೇರಿಸಿ ಪಾವತಿಸಬೇಕಾಗುತ್ತದೆ.

ಸರ್ಕಾರದ ಈ ನಿರ್ಧಾರದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಅತ್ಯಂತ ಜನ ವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಇದು ಅತ್ಯಂತ ಕೆಟ್ಟ, ಜನ ವಿರೋಧಿ ನಿರ್ಧಾರ. ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ ಎಂದು ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀನ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಭಾವನೆ, ಕಷ್ಟ ಸುಖಗಳ ಅರಿವಿಲ್ಲದ ಸಂಸದ, ಶಾಸಕರುಗಳು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ್ ಟೋಲ್ ಕಂಪೆನಿಯ ಹಿತ ಮಾತ್ರ ಇವರಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು. ಅವಿಭಜಿತ ಜಿಲ್ಲೆಯ ಜನ ಒಂದೇ ಧ್ವನಿಯಾಗಿ ಈ ಅತ್ಯಂತ ಕೆಟ್ಟ ನಿರ್ಧಾರವನ್ನು ದೃಢವಾಗಿ ವಿರೋಧಿಸಬೇಕು. ಬಿಜೆಪಿ ಸಂಸದ, ಶಾಸಕರುಗಳಿಗೆ ಆಡಳಿತ ನಡೆಸುವ ಯಾವುದೇ ಅನುಭವ ಇಲ್ಲ ಎಂಬುದು ಈಗ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಯ್ತು‌” ಎಂದು ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

ಇದೇ ವೇಳೆ ಸುರತ್ಕಲ್‌ ಟೋಲ್ ವಿರೋಧಿ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಶುಕ್ರವಾರ 29 ನೇ ದಿನಕ್ಕೆ ಕಾಲಿಟ್ಟಿದೆ. ಸುರತ್ಕಲ್‌ನಲ್ಲಿ ಟೋಲ್‌ ಸಂಗ್ರಹ ನಿಲ್ಲುವವರೆಗೂ ಮುಂದುವರಿಯಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಅದೇ ರೀತಿ, ಬಸ್ಸುಗಳು, ಟ್ರಕ್ಗಳು ​​ಮತ್ತು ಇತರ ಭಾರೀ ವಾಹನಗಳು ಕೂಡ ವಿಲೀನದ ನಂತರ ಹೆಜಮಾಡಿಯಲ್ಲಿ ಸುರತ್ಕಲ್ ಪ್ಲಾಜಾದ ಟೋಲ್ ಅನ್ನು ಪಾವತಿಸಬೇಕಾಗುತ್ತದೆ. ಸುರತ್ಕಲ್ ಮತ್ತು ಹೆಜಮಾಡಿಯಲ್ಲಿ ಕ್ರಮವಾಗಿ 50 ಸಿಂಗಲ್ ಟ್ರಿಪ್‌ಗಳಿಗೆ ಮಾಸಿಕ ಪಾಸ್‌ಗೆ 6,940 ರೂ. ಮತ್ತು 4,765 ರೂ. ಪಾವತಿಸುತ್ತಿರುವ ಬಸ್‌ಗಳು ವಿಲೀನದ ನಂತರ ಹೆಜಮಾಡಿಯಲ್ಲಿ 11,705 ರೂ. ಪಾವತಿಸಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ತಿದ್ದುಪಡಿ ನಿಯಮಗಳು-2010 ಮತ್ತು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ತಿದ್ದುಪಡಿ ನಿಯಮಗಳು-2014 ರ ಪ್ರಕಾರ ಟೋಲ್ ಮಾಡಬಹುದಾದ ಉದ್ದದ ಲೆಕ್ಕಾಚಾರವನ್ನು ಮಾಡಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎಚ್‌.ಎಸ್. ಲಿಂಗೇಗೌಡ ಅವರು ಉಡುಪಿ ಜಿಲ್ಲಾಧಿಕಾರಿಗೆ ಗುರುವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಕರ್ನಾಟಕ ಸರ್ಕಾರದ ನಿರಂತರ ಕೋರಿಕೆ, ಸ್ಥಳೀಯ ಸಾರ್ವಜನಿಕ ಹಾಗೂ ವಿಐಪಿ ಉಲ್ಲೇಖಗಳ ಆಧಾರದ ಮೇಲೆ, ಸುರತ್ಕಲ್ ಟೋಲ್ ಪ್ಲಾಜಾವನ್ನು ಪಕ್ಕದ ಹೆಜಮಾಡಿ ಟೋಲ್ ಪ್ಲಾಜಾದೊಂದಿಗೆ ವಿಲೀನಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದೆ. ಅದರಂತೆ, ಸುರತ್ಕಲ್ ಟೋಲ್ ಪ್ಲಾಜಾಗೆ ಬಳಕೆದಾರರ ಶುಲ್ಕವನ್ನು ಈಗ ಹೆಜಮಾಡಿಯಲ್ಲಿ ವಿಧಿಸಲಾಗುತ್ತದೆ. ಟೋಲ್ ಪ್ಲಾಜಾ ಎರಡೂ ಸ್ಟ್ರೆಚ್‌ಗಳಿಗೆ ಟೋಲ್ ಶುಲ್ಕವನ್ನು ಸೇರಿಸುತ್ತದೆ” ಎಂದು ಲಿಂಗೇಗೌಡ ಹೇಳಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಹೇಳಿದೆ.