ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನ ಗುಂಡಿಕ್ಕಿ ಕೊಲೆ: ಫುಡ್ ಡೆಲಿವರಿ ಬಾಯ್, ಮತ್ತಿಬ್ಬರ ಬಂಧನ..!

ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನ ಗುಂಡಿಕ್ಕಿ ಕೊಲೆ: ಫುಡ್ ಡೆಲಿವರಿ ಬಾಯ್, ಮತ್ತಿಬ್ಬರ ಬಂಧನ..!
ನವದೆಹಲಿ: ಆರ್ಡರ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಸುನೀಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ.ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿದ್ದರೂ ಪೂರಿ, ಸಬ್ಜಿ ಪಾರ್ಸಲ್ ರೆಡಿ ಆಗಿರಲಿಲ್ಲ. ಅದನ್ನು ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್‍ನವರು ಹೇಳಿದ್ದರು. ಇದೇ ವಿಷಯಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು. ಈ ವೇಳೆ ಇನ್ನೂ ಮೂವರು ಇದೇ ರೆಸ್ಟಾರೆಂಟ್ ಬಳಿ ನಿಂತಿದ್ದರು. ಇದೇ ವೇಳೆ ಮೂವರು ರೆಸ್ಟಾರೆಂಟ್ ಸಿಬ್ಬಂದಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ವಾಗ್ವಾದ ತಾರಕಕ್ಕೇರಿದ್ದು ಸುನೀಲ್ ಅಗರ್ವಾಲ್ನನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೂಡಲೇ ಸುನೀಲ್ರನ್ನು ರೆಸ್ಟಾರೆಂಟ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಸುನೀಲ್ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರೆಸ್ಟಾರೆಂಟ್ ಸಮೀಪದಲ್ಲೇ ವಾಸವಿರುವ ರಾಕೇಶ್ ನಾಗರ್, ರೆಸ್ಟಾರೆಂಟ್ ಸಿಬ್ಬಂದಿ ನನಗೆ ಘಟನೆ ಬಗ್ಗೆ ಮಾಹಿತಿ ನೀಡಿದರು. . ನಾನು ರೆಸ್ಟಾರೆಂಟ್ ತಲುಪುವ ವೇಳೆ ಅವರಿನ್ನೂ ಉಸಿರಾಡುತ್ತಿದ್ದರು. ನಾನು ಪೊಲೀಸರಿಗೆ ಮಾಹಿತಿ ನೀಡಿ ಆಯಂಬುಲೆನ್ಸ್ಗೆ ಕರೆ ಮಾಡಿದೆ. ಬಳಿಕ ನಾವು ನಮ್ಮ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ.
ಪರಾರಿಯಾಗಿದ್ದ ಮೂವರನ್ನು ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.