ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ನಂಬರ್ ಒನ್ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ :- ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ನಂಬರ್-1 ಆಗಿದೆ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ನಾವೇ ನಂಬರ್ ಒನ್ ಇದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಏಪ್ರಿಲ್ ಒಂದಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿಲಿದ್ದಾರೆ. ಕ್ಷೀರ ಬ್ಯಾಂಕ್, ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಏಪ್ರಿಲ್ 5 ರಂದು ನರೇಂದ್ರ ಮೋದಿ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ. ಪ್ರಧಾನಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುವುದು ಅಧಿಕೃತಗೊಳ್ಳಬೇಕಿದೆ ಎಂದರು.
ನನ್ನ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲು ತೆರಳುತ್ತಿದ್ದೇನೆ. ಬಜೆಟ್ ನಲ್ಲಿ ಘೋಷಣೆ ಯಾದ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ವಿಶೇಷ ಸಮಿತಿ ರಚನೆ ಮಾಡಲಾಗುತ್ತದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ ಎಂದು ಅವರು ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನವೆಂಬರ್ ನಲ್ಲಿ ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಡೆಯಲಿದ್ದು, ಅದರ ಸಿದ್ಧತೆ ಭರದಿಂದ ನಡೆದಿದೆ ಎಂದರು.