ಪಾವಗಡ ವಿಧಾನಸಭಾ ಚುನಾವಣೆ ; ಶಾಸಕ ವೆಂಕಟರಮಣಪ್ಪ ಬದಲಿಗೆ ಯಾರಿಗೆ ಟಿಕೆಟ್‌?

ಪಾವಗಡ ವಿಧಾನಸಭಾ ಚುನಾವಣೆ ; ಶಾಸಕ ವೆಂಕಟರಮಣಪ್ಪ ಬದಲಿಗೆ ಯಾರಿಗೆ ಟಿಕೆಟ್‌?

ಪಾವಗಡ: ಈ ಬಾರಿಯ ವಿಧಾನಸಭಾ ಚುನಾವಣೆ ಕ್ಷೇತ್ರದ ಮಟ್ಟಿಗೆ ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ಕಾಂಗ್ರೆಸ್‌ ಟಿಕೆಟ್‌ಗೆ 9 ಮಂದಿ ಅರ್ಜಿ ಸಲ್ಲಿಸಿದ್ದು, ಸ್ಪರ್ಧೆಗೆ ಭಾರೀ ಪೈಪೋಟಿ ನಡೆಯುತ್ತಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೆಸರನ್ನು ಘೋಷಣೆ ಮಾಡಿದ್ದು, ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿ ಪಕ್ಷದಿಂದ ನೆರಳೇಕುಂಟೆ ನಾಗೇಂದ್ರಕುಮಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕ್ಷೇತ್ರದಲ್ಲಿ ಈಗಷ್ಟೇ ನೆಲೆ ಕಾಣುತ್ತಿರುವ ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ ನಡೆಯುತ್ತಿದೆ.

ವಕೀಲ ಕೃಷ್ಣನಾಯ್ಕ, ರವಿಶಂಕರ್‌ ನಾಯ್ಕ, ಕೊತ್ತೂರು ಹನುಮಂತರಾಯಪ್ಪ, ಸಾಕೇಲ ಶಿವಕುಮಾರ್‌ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದು, ಯಾರಿಗೆ ಟಿಕೆಟ್‌ ಸಿಗುತ್ತೆ ಕಾದು ನೋಡಬೇಕು. ಇನ್ನು ಆಮ್‌ ಆದ್ಮಿ ಪಕ್ಷದಿಂದ ರಾಮಾಂಜಿನಪ್ಪ, ಕೆ.ಆರ್‌.ಎಸ್‌.ಪಕ್ಷದಿಂದ ಗೋವಿಂದಪ್ಪ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ನಿಂದ ಮಾಜಿ ಶಾಸಕ ತಿಮ್ಮರಾಯಪ್ಪ ಸೇರಿ ನೆರಳೇಕುಂಟೆ ನಾಗೇಂದ್ರಕುಮಾರ್‌ ಮತ್ತಿತರರು ಪಕ್ಷದ ಟಿಕೆಟ್‌ಗಾಗಿ ಫೈಟ್‌ ಮಾಡಿದ್ದರು. ಕೆಲವು ಪಕ್ಷದ ಮುಖಂಡರು ತಿಮ್ಮರಾಯಪ್ಪವರಿಗೆ ಟಿಕೆಟ್‌ ನೀಡಬಾರದೆಂದು ವರಿಷ್ಠರ ಗಮನಕ್ಕೆ ತಂದಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಮ್ಮರಾಯಪ್ಪಗೇ ಟಿಕೆಟ್‌ ಘೋಷಣೆ ಮಾಡಿದ್ದು, ಇದರಿಂದ ಬೇಸತ್ತ ಕೆಲವು ಜೆಡಿಎಸ್‌ ಮುಖಂಡರು ಪಕ್ಷ ಬಿಡಲು ತಯಾರಿ ನಡೆಸಿದ್ದಾರೆ.

ಖರ್ಚು ಮಾಡಲ್ಲ: ತಿಮ್ಮರಾಯಪ್ಪನವರು ಒಳ್ಳೆಯ ಅಭ್ಯರ್ಥಿ. ಆದರೆ ಚುನಾವಣೆಯಲ್ಲಿ ಹಣ ಖರ್ಚು ಮಾಡುವುದಿಲ್ಲ, ಕಾರ್ಯಕರ್ತರು, ಮುಖಂಡರಿಗೆ ಕಷ್ಟ ಬಂದಾಗ ಹಣಕಾಸು ನೆರವು ನೀಡಲ್ಲ, ಕೇವಲ ಮಾತಿನ ಭರವಸೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಬಣ ರಾಜಕೀಯದಿಂದ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ನಂಬಿಕೆ ಆ ಪಕ್ಷದ ಜೆಡಿಎಸ್‌ ಮುಖಂಡರ, ಕಾರ್ಯಕರ್ತರದ್ದಾಗಿದೆ.

ಕೆಆರ್‌ಪಿಪಿ ಅಭ್ಯರ್ಥಿ ನೆರಳೇಕುಂಟೆ ನಾಗೇಂದ್ರ ಕುಮಾರ್‌ ಅವರನ್ನು ಜೆಡಿಎಸ್‌ ಹಿರಿಯ ಮುಖಂಡರು ಲಘುವಾಗಿ ಪರಿಗಣಿಸಿ ಅವರು ಪಕ್ಷದ ಟಿಕೆಟ್‌ ಕೇಳಲು ಹೋದಾಗ ಮಾತನಾಡಿಸಿರಲ್ಲಿಲ್ಲ. ಆದ್ದರಿಂದ ಅವರು ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್‌ ಎಷ್ಟು ಇದೆ ಎಂಬುದನ್ನು ಜೆಡಿಎಸ್‌ ಮುಖಂಡರಿಗೆ ತೋರಿಸಬೇಕು ಎಂಬ ಛಲದಿಂದ ಎಲ್ಲ ಅಭ್ಯರ್ಥಿಗಳಿಗಿಂತ ಮೊದಲೇ ಪ್ರಚಾರ ಪ್ರಾರಂಭ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಕಾಂಗ್ರೆಸ್‌ ಪಕ್ಷದ ಎಚ್‌.ವಿ.ವೆಂಕಟೇಶ್‌, ಕೆಆರ್‌ಪಿಪಿ ನೆರಳೇಕುಂಟೆ ನಾಗೇಂದ್ರ ಕುಮಾರು ಅವರು ಮಾತ್ರ ತಾಲೂಕಾದ್ಯಂತ ದೇವಸ್ಥಾನ, ಮದುವೆ, ಸಾವು ಯಾವುದೇ ಇರಲಿ ಹಣ ಸಹಾಯ ಮಾಡುತ್ತ ಚುನಾವಣೆ ಪ್ರಚಾರ ನಡೆ ಸುತ್ತಿದ್ದಾರೆ.
ವೆಂಕಟರಮಣಪ್ಪ ಪುತ್ರನಿಗೆ ಪೈಪೋಟಿಯಾಗಿ ಕಾಂಗ್ರೆಸ್‌ ಮುಖಂಡರಾದ ರಾಮ ಚಂದ್ರಪ್ಪ, ಗಾಯತ್ರಿಬಾಯಿ, ಕೋರ್ಟ್‌ ನರಸಪ್ಪ, ಕೃಷ್ಣನಾಯ್ಕ, ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಕೆಂಚಮಾರಯ್ಯ, ಇದರ ಜತೆಗೆ ಚಿತ್ರದುರ್ಗ ಲೋಕಸಭಾ ಮಾಜಿ ಸದಸ್ಯ ಚಂದ್ರಪ್ಪ ಹೆಸರು ಕೂಡ ಮುಂಚೂ ಣಿ ಯಲ್ಲಿದೆ. ಈ ಮಧ್ಯೆ ಮಾಜಿ ಸಚಿವ ಎಚ್‌. ಆಂಜ ನೇಯ ಹೆಸರೂ ಚಲಾವಣೆಗೆ ಬಂದಿದೆ. ಮಾಜಿ ಶಾಸಕ ಸೋಮ್ಲನಾಯ್ಕ ಅವರ ಪುತ್ರಿ ಕಾಂಗ್ರೆಸ್‌ನ ಗಾಯತ್ರಿ ಬಾಯಿ ಒಂದು ಬಾರಿ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಕೋರ್ಟ್‌ ನರಸಪ್ಪ 1999ರಲ್ಲಿ ಸರಕಾರಿ ನೌಕರರಿಗೆ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅಂದಿನಿಂದ ಪ್ರತೀ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಕೃಷ್ಣನಾಯ್ಕ, ಕೆಂಚಮಾರಯ್ಯ ಕೂಡ ಚುನಾವಣೆಯಲ್ಲಿ ನಿಲ್ಲಲು ಅರ್ಜಿ ಸಲ್ಲಿಸಿದ್ದಾರೆ. ಲೋಕಸಭಾ ಮಾಜಿ ಸದಸ್ಯ ಚಂದ್ರಪ್ಪನವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬದ ಬಗ್ಗೆ ಗೊಂದಲವಿದೆ. ಪಕ್ಷದಲ್ಲಿ ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ಬಂದು ಟಿಕೆಟ್‌ ಕೇಳುವ ಮುಖಂಡರ ಬಗ್ಗೆ ಕಾರ್ಯಕರ್ತರಿಗೆ, ಮುಖಂಡರಿಗೆ ಅಸಮಾಧಾನವಿದೆ.

ವೆಂಕಟರಮಣಪ್ಪ ಪುತ್ರ ವೆಂಕಟೇಶ್‌ಗೆ ಸಿಗುತ್ತಾ ಟಿಕೆಟ್‌?
ಕಾಂಗ್ರೆಸ್‌ನ ಹಾಲಿ ಶಾಸಕ ವೆಂಕಟರಮಣಪ್ಪ ಈ ಬಾರಿ ಸ್ಪರ್ಧಿಸುವುದಿಲ್ಲ. ರಾಜಕೀಯದಿಂದ ನಿವೃತ್ತಿ  ಹೊಂದುತ್ತೇನೆ ಎಂದಿದ್ದಾರೆ. ಹೀಗಾಗಿ ತಮ್ಮ ಪುತ್ರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ವಿ.ವೆಂಕಟೇಶ್‌ಗೆ ಟಿಕೆಟ್‌ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇವರು 2013ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪಧಿ ìಸಿ 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. 2 ಸಲ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಚ್‌.ವಿ.ವೆಂಕಟೇಶ್‌ ಅವರಿಗೆ ಪಕ್ಷದ ಹಿರಿಯ ರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌ ಸಹಿತ ಮತ್ತಿತರ ಆಶೀರ್ವಾದವಿದೆ. ಟಿಕೆಟ್‌ ಗ್ಯಾರಂಟಿ ಎಂಬ ಮಾತುಗಳಿವೆ.

-ರಾಸಿನೇನಿ ಸಂತೋಷ್‌ ಕುಮಾರ್‌