'ಕಾಂತಾರ' ಪೋಸ್ಟರ್ ಮೇಲೆ ಅಶ್ಲೀಲ ಬರೆಹ, ಪ್ರತಿಭಟನೆ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದೆ.
'ಕಾಂತಾರ' ಸಿನಿಮಾದಲ್ಲಿ ಬೆಳಕುಚೆಲ್ಲಲಾಗಿರುವ ದೈವ ಸಂಪ್ರದಾಯ ಇನ್ನಿತರ ವಿಷಯಗಳ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಿದೆ.
'ಕಾಂತಾರ' ಸಿನಿಮಾಕ್ಕೆ ಹಿಂದು ಬಣ್ಣ ಬಳಿಯುತ್ತಿದ್ದಂತೆ ಕೆಲವರು ಇದೇ ಕಾರಣಕ್ಕೆ ಸಿನಿಮಾದ ವಿರೋಧವಾಗಿ ದನಿ ಎತ್ತಲು ಆರಂಭಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ 'ಕಾಂತಾರ' ಸಿನಿಮಾದ ಪೋಸ್ಟರ್‌ಗಳ ಮೇಲೆ ಅಶ್ಲೀಲ ವಾಕ್ಯಗಳನ್ನು ಬರೆಯಲಾಗಿದ್ದು, ಇದು ಕೆಲ ಸಮಯ ಸೂಕ್ಷ್ಮ ವಾತಾವರಣವನ್ನು ಸೃಷ್ಟಿಸಿತ್ತು. ಶಿವಮೊಗ್ಗದ ಕೋಟ್ ಸರ್ಕಲ್ ಬಳಿ ಗೋಡೆಗಳಿಗೆ ಜಾಹೀರಾತಿನ ಮಾದರಿಯಲ್ಲಿ ಅಂಟಿಸಲಾಗಿದ್ದ 'ಕಾಂತಾರ' ಸಿನಿಮಾದ ಪೋಸ್ಟರ್ ಮೇಲೆ ಕೆಲವು ಕಿಡಿಗೇಡಿಗಳು ಅವಾಚ್ಯ ಪದಗಳನ್ನು ಬರೆದಿದ್ದರು. ಇದು ಹಿಂದು ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಪ್ರತಿಭಟನೆ ಸಹ ನಡೆಯಿತು. 'ಕಾಂತಾರ' ಸಿನಿಮಾದ ಪೋಸ್ಟರ್ ಮೇಲೆ ಅವಾಚ್ಯಶಬ್ದಗಳನ್ನು ಬರೆದಿರುವುದನ್ನು ಖಂಡಿಸಿ ಶಿವಮೊಗ್ಗದ ಹಿಂದು ಜಾಗರಣೆ ವೇದಿಕೆ ಸದಸ್ಯ ಪ್ರತಿಭಟನೆ ನಡೆಸಿದರು. ''ಈ ರೀತಿಯ ದೇಶವಿರೋಧಿ, ಹಿಂಸೆಗೆ ಪ್ರಚೋದನೆ ನೀಡುವ, ಸಮಾಜದ ಶಾಂತಿ ಕದಡುವ ಗೋಡೆ ಬರಹಗಳು ಮಂಗಳೂರಿನಲ್ಲಿ ಮಾತ್ರ ಕಂಡು ಬರುತ್ತಿದ್ದವು ಆದರೆ ಈಗ ಈ ಬರಹಗಳು ಶಿವಮೊಗ್ಗದಲ್ಲಿಯೂ ಕಂಡು ಬಂದಿವೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಸದಸ್ಯರು ಆಗ್ರಹಿಸಿದ್ದಾರೆ. ಉದ್ದೇಶಪೂರ್ವಕವಾಗಿ 'ಕಾಂತಾರ' ಸಿನಿಮಾದ ಪೋಸ್ಟರ್ ಮೇಲೆ ಅವಾಚ್ಯ ಶಬ್ದಗಳನ್ನು ಬರೆಯಲಾಗಿದೆ. ಅವಾಚ್ಯ ಶಬ್ದ ಬರೆದ ಭಯೋತ್ಪಾದಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ ಹಿಂದು ಜಾಗರಣೆ ವೇದಿಕೆ ಸದಸ್ರು ವಿಷಯ ತಿಳಿಯುತ್ತಲೆ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ, ಅವಾಚ್ಯಗಳನ್ನು ಬರೆಯಲಾಗಿದ್ದ ಪೋಸ್ಟರ್‌ನ ಭಾಗವನ್ನಷ್ಟೆ ಕಿತ್ತು ಎಸೆದಿದ್ದಾರೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದವರು ಅಂಟಿಸಿದ ಪೋಸ್ಟರ್‌ನ ಮೇಲೆ ಅವಾಚ್ಯ ಶಬ್ದಗಳು ಬರೆದಿರುವ ಕಾರಣ, ಮಲ್ಲಿಕಾರ್ಜುನ ಚಿತ್ರಮಂದಿರದವರು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದಿದ್ದಾರೆ. 'ಕಾಂತಾರ' ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿಯಾಗಲಿ ಇನ್ನಾವುದೇ ಚಿತ್ರತಂಡದ ಸದಸ್ಯರಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 'ಕಾಂತಾರ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು ಕರಾವಳಿಯ ದೈವ ಆರಾಧನೆ ಸಂಸ್ಕೃತಿಯ ಬಗ್ಗೆ ಸಿನಿಮಾದಲ್ಲಿ ಪ್ರಧಾನವಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಕಿಶೋರ್ ಸೇರಿ ಅನೇಕ ನಟರಿದ್ದಾರೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ.