ಸಾಮಾಜಿಕ ಭದ್ರತೆ ಯೋಜನೆಗೆ ಜೀವಿತಾವಧಿಯಲ್ಲಿ ಒಂದೇ ಸಂಖ್ಯೆ; ಕೇಂದ್ರದಿಂದ ಚಿಂತನೆ

ಸಾಮಾಜಿಕ ಭದ್ರತೆ ಯೋಜನೆಗೆ ಜೀವಿತಾವಧಿಯಲ್ಲಿ ಒಂದೇ ಸಂಖ್ಯೆ; ಕೇಂದ್ರದಿಂದ ಚಿಂತನೆ
ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿನ ಎಲ್ಲ ಉದ್ಯೋಗಿಗಗಳಿಗೂ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಪೋರ್ಟ್ ಮಾಡಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಅಧಿಕಾರಿಗಳು ಆಲೋಚಿಸುತ್ತಿರುವ ಪ್ರಕಾರ, ಒಬ್ಬ ಉದ್ಯೋಗಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಸಂಖ್ಯೆಯು ಆಧಾರ್ ಜೊತೆಗೆ ಜೋಡಣೆ ಆಗಿರುತ್ತದೆ. ಆ ಸಂಖ್ಯೆಯೇ ಸಂಘಟಿತವಾಗಿರಲಿ ಅಥವಾ ಅಸಂಘಟಿತ ವಲಯ ಆಗಿರಲಿ, ಆ ಉದ್ಯೋಗಿಯ ಜೀವಿತಾವಧಿಯ ಉದ್ದಕ್ಕೂ ಇರುತ್ತದೆ ಎಂದು ಮಿಂಟ್ ವರದಿ ಮಾಡಿದೆ. ಆದರೆ ಈ ಬಗ್ಗೆ ಪ್ರತ್ಯೇಕವಾಗಿ ಖಾತ್ರಿ ಆಗಿಲ್ಲ. ಒಬ್ಬ ಉದ್ಯೋಗಿಯ ಜೀವಿತಾವಧಿಯಲ್ಲಿ ಒಂದು ಸಲ ನೋಂದಣಿ, ಒಂದು ಸಂಖ್ಯೆ ಇರುತ್ತದೆ. ಅದನ್ನು ಈಗ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಆಗಿದೆ.
ಸದ್ಯಕ್ಕೆ ಹೇಗಿದೆ ಅಂದರೆ, ಇಪಿಎಫ್ಒ ಹಾಗೂ ಇಎಸ್ಐಸಿಗೆ ನೋಂದಣಿ ಮಾಡುವ ಉದ್ಯೋಗಿಗಳಿಗೆ ವಿಶಿಷ್ಟ ಸಂಖ್ಯೆ ಇರುತ್ತದೆ. ಇನ್ನೂ ಮುಂದುವರಿದು, ಕಾರ್ಮಿಕ ಸಚಿವಾಲಯವು ಆಗಸ್ಟ್ 26ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ರಾಷ್ಟ್ರೀಯ ಡೇಟಾಬೇಸ್ ಅಥವಾ ಇ-ಶ್ರಮ್ ಪೋರ್ಟಲ್ಗೆ ಚಾಲನೆ ನೀಡಿದೆ. ಈ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಂಡು, ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಹೀಗಾದರೆ ಇದು ಸರ್ಕಾರ ಉತ್ತಮವಾಗಿ ನಿಗಾ ವಹಿಸುವುದಕ್ಕೆ ಮತ್ತು ತಳಮಟ್ಟದಲ್ಲಿ ಅಸಂಘಟಿತ ವಲಯದ ಗುಂಪನ್ನು ತಲುಪಲು ಸಹಾಯವಾಗುತ್ತದೆ.
ಕಾರ್ಮಿಕ ಮಾರುಕಟ್ಟೆ ಬದಲಾಗುತ್ತಿದೆ. ಜನರು ಅಗತ್ಯಕ್ಕೆ ತಕ್ಕಂತೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೆಲಸಕ್ಕೆ ಸಾಗುತ್ತಿದ್ದಾರೆ. ಮಾರುಕಟ್ಟೆ ಸನ್ನಿವೇಶ, ಆದಾಯ, ಆರಾಮ ಇವುಗಳ ಮೇಲೆ ಅವಲಂಬಿತವಾಗುತ್ತಲಿದೆ. ಸಾಮಾಜಿಕ ಭದ್ರತೆ ಪೋರ್ಟಬಲ್ ವ್ಯವಸ್ಥೆಯಿಂದ ಅನುಕೂಲ ಆಗಲಿದೆ ಎಂಬುದು ಕೇಳಿಬರುತ್ತಿರುವ ಅಭಿಪ್ರಾಯ. ಕೆಲಸ ಬದಲಾಯಿಸಿದರೂ ಒಂದು ಸಾಮಾಜಿಕ ಭದ್ರತೆ ಸಂಖ್ಯೆ ಇರುವುದಕ್ಕೆ ಸಾಧ್ಯವಿದೆ. ಒಂದು ಸಲ ಇದು ಅಂತಿಮ ಆದ ಮೇಲೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.