ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ( Karnataka Government Employees ) ತಮ್ಮ ಚರ, ಸ್ಥಿರಾಸ್ತಿಯ ವಿವರವನ್ನು ( Immovable property ) ಸಲ್ಲಿಸೋದಕ್ಕೆ ಈವರೆಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗುತ್ತಿತ್ತು. ಇದೀಗ ಈ ಕೊನೆ ದಿನವನ್ನು ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 24ರ ಉಪ ನಿಯಮ (2)ಕ್ಕೆ ತಿದ್ದುಪಡಿಯನ್ನು ತರಲಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್ ಎ, ಬಿ, ಸಿ, ಡಿ ವರ್ಗದ ಎಲ್ಲಾ ಅಧಿಕಾರಿ, ನೌಕರರು ತಮ್ಮ ಚರ, ಸ್ಥಿರಾಸ್ತಿ ವಿವರಗಳ ಬಗ್ಗೆ ಪ್ರತಿ ವರ್ಷದ ಡಿಸೆಂಬರ್ 31ರ ಅಂತ್ಯಕ್ಕೆ ಇದ್ದಂತೆ ಸಲ್ಲಿಸುತ್ತಿದ್ದ ವಿವರಗಳನ್ನು ಇನ್ಮುಂದೆ ಮಾರ್ಚ್ 31ರ ಅಂತ್ಯಕ್ಕೆ ( ಆರ್ಥಿಕ ವರ್ಷ) ಇದ್ದಂತೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳ ಮುಖಾಂತರ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಆಸ್ತಿ ಹೊಣೆಗಾರಿಕೆ ತಖ್ತೆಗಳ ವಿವರಗಳನ್ನು ಒಂದು ಬಾರಿಯ ಕ್ರಮವಾಗಿ ದಿನಾಂಕ 01-01-2022ರಿಂದ 31-03-2023ರ ಅಂತ್ಯಕ್ಕೆ ಒಟ್ಟು 15 ತಿಂಗಳುಗಳ ವಿವರಗಳನ್ನು ಏಪ್ರಿಲ್ 2023ರಲ್ಲಿ ಸಲ್ಲಿಸುವಂತೆ ಹಾಗೂ ಮುಂದಿನ ಸಾಲುಗಳ ಆಸ್ತಿಕ ಹೊಣೆಗಾರಿಕೆ ವಿವರಗಳನ್ನು ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಆಯಾ ಆರ್ಥಿಕ ವರ್ಷದ 1ನೇ ಏಪ್ರಿಲ್ ನಿಂದ ಮಾರ್ಚ್ 31ರ ಅಂತ್ಯಕ್ಕೆ ವಿಳಂಬವಿಲ್ಲದೇ ಸಕಾಲದಲ್ಲಿ ಸಲ್ಲಿಸುವಂತೆ ತಿಳಿಸಿದ್ದಾರೆ