ಒಂದೇ ಆಟೋದಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರುವುದಂತೂ ಖಚಿತv

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಆಟೋ ರಿಕ್ಷಾ ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿದೆ. ಮೊದಲೆಲ್ಲ ಬಸ್ಗಾಗಿ ಕಾದು ಕುಳಿತುಕೊಳ್ಳುತ್ತಿದ್ದರು. ಬಸ್ ಹತ್ತಿದ್ದರೂ ಕೂಡ ಅದು ಪ್ರಮುಖ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿತ್ತು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಟೋಗೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾರಣ ಏನೆಂದರೆ, ಆಟೋದಲ್ಲಿ ಪ್ರಯಾಣಿಸುತ್ತಿರುವವರ ಒಟ್ಟು ಸಂಖ್ಯೆ ಕೇಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ.
ಸಾಮಾನ್ಯವಾಗಿ ಆಟೋದಲ್ಲಿ 5 ಮಂದಿ ಪ್ರಯಾಣಿಸಬಹುದು. ಹೆಚ್ಚೆಂದರೆ 10 ರಿಂದ 12 ಪ್ರಯಾಣಿಕರು ತೆರಳಬಹುದು. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಬರೋಬ್ಬರಿ 50 ಮಂದಿ ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು.
ಈ ವಿಡಿಯೋ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಅಲಿರಾಜಪುರಕ್ಕೆ ಸಂಬಂಧಿಸಿದ್ದು, ಒಂದೇ ಆಟೋದಲ್ಲಿ ಸುಮಾರು 50 ಮಂದಿಯನ್ನು ಕುರಿ ತುಂಬಿದ ಹಾಗೆ ತುಂಬಿಕೊಂಡು ಆಟೋ ಚಾಲಕ ಹೋಗುತ್ತಿರುವುದನ್ನು ಕಾಣಬಹುದು. ಆಟೋದ ಸುತ್ತಲೂ ಪ್ರಯಾಣಿಕರು ನೇತಾಡುತ್ತಿರುವುದನ್ನು ಸಹ ನೋಡಬಹುದು. ಈ ವಿಡಿಯೋವನ್ನು ಡಿ.7ರಂದು ಕಾಕ್ವಿ ಹೆಸರಿನ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
ವೈರಲ್ ವಿಡಿಯೋ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು, ರಿಜಿಸ್ಟ್ರೇಸನ್ ನಂಬರ್ ಆಧಾರದ ಮೇಲೆ ಆಟೋವನ್ನು ಹುಡುಕಿ ದಂಡ ವಿಧಿಸಲು ಪೊಲೀಸರು ಆಟೋವನ್ನು ಹುಡುಕುತ್ತಿದ್ದಾರೆ. (ಏಜೆನ್ಸೀಸ್)