ಸಿದ್ಧರಾಮಯ್ಯ ಉಡುಪಿ ಮಠವನ್ನು ಸ್ವಾಧೀನ ಮಾಡಿಕೊಳ್ಳಲು ಚಿಂತಿಸಿದ್ದರು!

ಸಿದ್ಧರಾಮಯ್ಯ ಉಡುಪಿ ಮಠವನ್ನು ಸ್ವಾಧೀನ ಮಾಡಿಕೊಳ್ಳಲು ಚಿಂತಿಸಿದ್ದರು!

ಉಡುಪಿ, ಡಿಸೆಂಬರ್ 23; ರಾಜ್ಯದಲ್ಲಿ ಮತಾಂತರ ಕುರಿತ ಚರ್ಚೆ ತೀವ್ರವಾಗಿ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಂದು ಸ್ಫೋಟಕ ವಿಚಾರ ಹೊರಬಿದ್ದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಉಡುಪಿಯ ಶ್ರೀ ಕೃಷ್ಣ ಮಠವನ್ನು ಸರ್ಕಾರದ ಸುಪರ್ದಿಗೆ ಪಡೆಯಲು ಚಿಂತನೆ ನಡೆಸಿದ್ದರು ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ.

ಮಾಜಿ ಸಚಿವ, ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಈ ಬಗ್ಗೆ ಮಾತನಾಡಿದರು. "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಉಡುಪಿಯ ಶ್ರೀ ಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲು ತೀರ್ಮಾನ ಮಾಡಿದ್ದರು" ಎಂದರು.

"ನನಗೆ ಈ ವಿಷಯ ಗೊತ್ತಾದಾಗ ನೇರ ಮುಖ್ಯಮಂತ್ರಿಯವರ ಬಳಿ ಹೋಗಿ, ಶ್ರೀ ಕೃಷ್ಣ ಮಠವನ್ನು ವಶಪಡಿಸಿಕೊಂಡರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತಾ ಹೇಳಿದೆ. ಅಲ್ಲಿಗೇ ಆ ವಿಚಾರವನ್ನು ಕೈ ಬಿಡಲಾಗಿತ್ತು" ಎಂದು ಪ್ರಮೋದ್ ಮಧ್ವರಾಜ್ ಸ್ಫೋಟಕ ವಿಷಯ ಪ್ರಸ್ತಾಪಿಸಿದರು.

"ಈ ವಿಷಯವನ್ನು ನಾನು ಯಾರ ಬಳಿಯೂ ಪ್ರಸ್ತಾಪ ಮಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ವಿಚಾರವನ್ನು ಬಹಿರಂಗಪಡಿಸುತ್ತಿದ್ದೇನೆ" ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

"ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸವಿದೆ. ರಾಮಾನುಜಚಾರ್ಯಯರು, ಶಂಕರಾಚಾರ್ಯರು, ಮಧ್ವಾಚಾರ್ಯರು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸ್ಥಾಪಿಸುವ ಮೊದಲೇ ಕೃಷ್ಣ ಮಠ ರೂಪುಗೊಂಡಿತ್ತು. ನಾಡಿಗೆ ಮತ್ತು ಉಡುಪಿಗೆ ಶ್ರೇಷ್ಠವಾಗಿರುವ ಸರ್ಕಾರ ತನ್ನ ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶವನ್ನು ತಪ್ಪಿಸಿದ ಸಣ್ಣ ತೃಪ್ತಿ ನನಗಿದೆ" ಎಂದರು.

ಪ್ರಮೋದ್ ಮಧ್ವರಾಜ್ ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಜೊತೆ ಅಂತರವನ್ನು ಕಾಯ್ದುಕೊಂಡಿದ್ದಾರೆ. ಮಧ್ವರಾಜ್ ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿಗಳಿದ್ದರೂ ಅದನ್ನು ಬಿಜೆಪಿ ಮತ್ತು ಮಧ್ವರಾಜ್ ತಳ್ಳಿ ಹಾಕಿದ್ದರು. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ತುಂಬಿದ ಸಭೆಯಲ್ಲೇ ಬಹಿರಂಗವಾಗಿ ಪ್ರಮೋದ್ ಮಧ್ವರಾಜ್ ಹಾಡಿಹೊಗಳಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿ ಶ್ರೀ ಕೃಷ್ಣ ಮಠವನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದರು ಎಂಬ ಮಧ್ವರಾಜ್ ಹೇಳಿಕೆ ರಾಜಕೀಯ ಅಂಗಳದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಮತಾಂತರ ಮಸೂದೆಯ ವಿಚಾರ ಸರ್ಕಾರ ಮತ್ತು ಪ್ರತಿ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.

ಈ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೃಷ್ಣಮಠವನ್ನು ಸರ್ಕಾರದ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದ್ದರು ಎಂಬ ಸ್ವಪಕ್ಷೀಯರ ಆರೋಪ ಬಿಜೆಪಿಗೆ ಹೊಸ ಅಸ್ತ್ರವನ್ನು ನೀಡಿದೆ.

ಮತಾಂತರ ಮಸೂದೆಯ ವಿಚಾರವಾಗಿ ನಡೆದ ಕಲಾಪದ ವೇಳೆ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಯತ್ನಿಸಿದ್ದರು ಎಂಬ ವಿಚಾರವನ್ನು ಬಹಿರಂಗಗೊಳಿಸಿ ಸಿದ್ದರಾಮಯ್ಯರನ್ನು ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿಸಿತ್ತು. ಇದೀಗ ಈ ವಿಚಾರವೂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.