ಬೆಳಗಾವಿ ಗಡಿ : ಒಗ್ಗಟ್ಟಿನ ಸಂದೇಶ ಪ್ರದರ್ಶಿಸಿದ ಪಕ್ಷಗಳು

ಬೆಳಗಾವಿ ಗಡಿ : ಒಗ್ಗಟ್ಟಿನ ಸಂದೇಶ ಪ್ರದರ್ಶಿಸಿದ ಪಕ್ಷಗಳು

ಬೆಳಗಾವಿ: ಬೆಳಗಾವಿ ಗಡಿ ವಿಷಯದಲ್ಲಿ ಆಡಳಿತ ಮತ್ತು ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಬುಧವಾರ ರಾಜ್ಯದ ನಿಲುವಿನ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ.

ಮಂಗಳವಾರ ಉಭಯ ಸದನಗಳಲ್ಲೂ ಮಹಾರಾಷ್ಟ್ರದ ಆಟಾಟೋಪ ಪ್ರತಿಧ್ವನಿಸಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಿಲುವಳಿ ಸೂಚನೆ ಮಂಡಿಸಿವೆ.

ಸ‌ದನದಲ್ಲೇ ಸೂಕ್ತವಾದ ನಿರ್ಣಯವನ್ನು ಕೈಗೊಂಡು ರಾಜ್ಯದ ನಿಲುವು ಕುರಿತು ಸಂದೇಶ ರವಾನಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಜೆಡಿಎಸ್‌ ಉಪನಾಯಕ ಬಂಡೆಪ್ಪ ಕಾಂಶೆಪುರ್‌ ಸಹಿತ ಇಡೀ ಸದನ ಒಪ್ಪಿಗೆ ಸೂಚಿಸಿತು.

ಗಡಿ ಸಂಗತಿ ಮುಗಿದ ಅಧ್ಯಾಯ
ವಿಷಯ ಪ್ರಸ್ತಾವಿಸಿದ ಸಿದ್ದರಾಮಯ್ಯ, ಮಹಾಜನ್‌ ವರದಿಯನ್ನು ನಾವು ಒಪ್ಪಿಕೊಂಡಿರುವುದರಿಂದ ಈಗಾಗಲೇ ಇದು ಮುಗಿದ ಅಧ್ಯಾಯ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವುದರಿಂದ ಈ ವಿಷಯವನ್ನು ಜೀವಂತವಾಗಿಡುವ ಯತ್ನ ನಡೆಯುತ್ತಿದೆ ಎಂದರು.

ಮಹಾರಾಷ್ಟ್ರದವರ ಪುಂಡಾಟಿಕೆ, ತೀಟೆ-ತಂಟೆ ಇನ್ನೂ ನಿಂತಿಲ್ಲ. ಎರಡು ರಾಜ್ಯಗಳ ಮಧ್ಯೆ ಉದ್ವಿಗ್ನತೆ ನಿರ್ಮಾಣ ಮಾಡುತ್ತಿದ್ದಾರೆ.

ಬೆಳಗಾವಿ ಅಧಿವೇಶನದ ಸಂದರ್ಭ ದಲ್ಲಿ ಮಹಾ ಮೇಳವ್‌, ನ.1ರಂದು ಬ್ಲಾಕ್‌ ಡೇ ಆಚರಣೆಯಂಥ ಕುಟಿಲ ಪ್ರಯತ್ನಗಳಿಗೆ ಸೊಪ್ಪು ಹಾಕಬಾರದು. ರಾಜ್ಯ ಸರಕಾರ ಗಟ್ಟಿ ನಿಲುವು ತಾಳಬೇಕು ಎಂದು ಹೇಳಿದರು.

ಕೇಂದ್ರ ಸರಕಾರ ಸಂಧಾನಕ್ಕೆ ಕರೆದಾಗ ಹೋಗುವ ಮೊದಲು ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದು, ನಮ್ಮ ನಿಲುವುಗಳನ್ನು ಕೇಳಬೇಕಿತ್ತು. ಅದನ್ನು ಮಾಡದೇ ದಿಲ್ಲಿಗೆ ಹೋಗಿ, ಗಡಿ ವಿಷಯವಾಗಿ ಸಚಿವರ ಸಮಿತಿ ರಚಿಸಲು ನಿರ್ಧರಿಸಿರುವುದು ಸರಿಯಲ್ಲ. ಹಾಗಾದರೆ ರಾಜ್ಯದಲ್ಲಿ ಗೃಹ ಸಚಿವರು ಸಮರ್ಥರಿಲ್ಲವೇ ಎಂದರು.