ಬೆಂಗಳೂರಲ್ಲಿ ಆಯಪ್ ಆಧಾರಿತ ಆಟೊ ಸೇವೆ ಅಧಿಕೃತ ಆಗುತ್ತದಾ? ಇಂದು ಅಂತಿಮ ನಿರ್ಧಾರ

ಬೆಂಗಳೂರು: ಆಯಪ್ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಆಟೋರಿಕ್ಷಾಗಳ ಸೇವೆ ಯನ್ನು ಅಧಿಕೃತಗೊಳಿಸಲು ಸಿದ್ಧತೆ ನಡೆಸಿರುವ ಸಾರಿಗೆ ಇಲಾಖೆ, ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮಕ್ಕೆ ಕೆಲ ಅಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಆಟೊರಿಕ್ಷಾ ಸೇವೆಗಳನ್ನು ಅಧಿಕೃತಗೊಳಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮಕ್ಕೆ ಕೆಲ ಅಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಆಟೊರಿಕ್ಷಾ ಸೇವೆಗಳನ್ನು ಅಧಿಕೃತಗೊಳಿಸಲು ಉದ್ದೇಶಿಸಲಾಗಿದೆ. ಮಂಗಳವಾರದ ಸಭೆಯಲ್ಲಿ ಈ ಪ್ರಸ್ತಾ
ವಕ್ಕೆ ಮುದ್ರೆ ಬಿದ್ದರೆ, ಕೆಲವೇ ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ.
ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ-2020ರ ಪ್ರಕಾರ ಆಯಪ್ ಆಧಾರಿತ ಸೇವೆಗಳ ಕನಿಷ್ಠ ದರ ₹25ರಿಂದ ₹30 ನಿಗದಿಪಡಿಸಬಹುದಾಗಿದೆ. ಅದೇ ಮಾದರಿಯ ದರವನ್ನು ಇತರೆ ವಾಹನಗಳಿಗೂ ಈ ಕಂಪನಿಗಳು ಅನುಸರಿಸಬಹುದು. ಅಲ್ಲದೇ ಕನಿಷ್ಠ ದರಕ್ಕಿಂತ ಶೇ 50ರಷ್ಟು ಕಡಿಮೆ ಅಥವಾ ಸೇವಾ ಶುಲ್ಕದ ರೂಪದಲ್ಲಿ ಗರಿಷ್ಠ ಒಂದೂವರೆ ಪಟ್ಟು ಹೆಚ್ಚಿಸಲು ಅವಕಾಶ ಇದೆ.
ವಿಮಾನ ಪ್ರಯಾಣದ ಟಿಕೆಟ್ ದರ ಕಾಲಕ್ಕೆ ತಕ್ಕಂತೆ ಏರಿಳಿತ ಇರುತ್ತದೆ. ಬೆಲೆ ಏರಿಕೆ ಮತ್ತು ಇಳಿಕೆ ಮಾಡಲು ಅಗ್ರಿಗೇಟರ್ ನಿಯಮಗಳಲ್ಲಿಯೇ ಅವಕಾಶ ಇರುವುದು ಇದಕ್ಕೆ ಕಾರಣ. ಇದೇ ಮಾದರಿಯಲ್ಲಿ ಆಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಅಗ್ರಿಗೇಟರ್ ಗಳು ದರ ವ್ಯತ್ಯಾಸಗಳನ್ನು ಮಾಡುತ್ತಾರೆ. ಒಮ್ಮೆ ಒಪ್ಪಿಗೆ ನೀಡಿದರೆ ಅವುಗಳನ್ನು ನಿಯಂತ್ರಣ ಮಾಡುವುದು ಕಷ್ಟ ಎನ್ನುತ್ತಾರೆ ಸಾರಿಗೆ ತಜ್ಞರು.
ಈ ಅಂಶವನ್ನು ಸೇರ್ಪಡೆ ಮಾಡುವ ಬಗ್ಗೆ ಸಾರಿಗೆ ಇಲಾಖೆ ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ಸೇರ್ಪಡೆ ಮಾಡಿದರೆ ಅದು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಯೂ ಇದೆ ಎನ್ನುವುದು ಅವರ ಆತಂಕ.
ಈ ಸಂಬಂಧ ಸೋಮವಾರ ನಡೆಯಬೇಕಿದ್ದ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಹೈಕೋರ್ಟ್ ಆದೇಶದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು.