ರೈತರ ನೆರವಿಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವುದು, ತೊಗರಿ ಬೋರ್ಡ್ ಬಲಪಡಿಸುವುದು, ರೈತರ ಸಾಲಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
'ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಈ ಬಗ್ಗೆ ಜಿಲ್ಲೆಯಲ್ಲಿ ಹೋರಾಟ ನಡೆಸಿ, ಬೆಳಗಾವಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು' ಎಂದು ತಿಳಿಸಿದರು.
'ಜಿಲ್ಲೆಯಲ್ಲಿ ತೊಗರಿ ಬೆಳೆಗಾರರಿಗೆ ಉಳಿಗಾಲವಿಲ್ಲದಂತಾಗಿದೆ. ಹೆಸರಿಗೆ ಮಾತ್ರ ತೊಗರಿ ಮಂಡಳಿ ಇದೆ. ಸುಮಾರು ವರ್ಷಗಳಿಂದ ತೊಗರಿ ಮಂಡಳಿಗೆ ನಯಾಪೈಸೆ ಅನುದಾನ ಬಂದಿಲ್ಲ. ತೊಗರಿ ಮಂಡಳಿ ಬಲಪಡಿಸಲು ಸರ್ಕಾರ ಮುಂದಾಗಬೇಕು' ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ರೈತ ಸಂಘದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಪಾಂಡುರಂಗ ಮಾವಿನಕರ, ಮುಖಂಡರಾದ ಅಲ್ತಾಫ್ ಹುಷೇನ್ ಇನಾಂದಾರ, ರೇವಣಸಿದ್ದಪ್ಪಾ, ಜಾವೇದ್ ಹುಷೇನ್, ಸುಭಾಷ್ ಜೇವರ್ಗಿ, ಸಿದ್ದರಾಮ ಹರವಾಳ, ಸಾಯಿಬಣ್ಣ ಗುಡುಬಾ, ರಾಯಪ್ಪಾ ಶಹಾಬಾದ ಇದ್ದರು.