ರಾಜ್ಯದಲ್ಲಿ 10 ಸಾವಿರ ಖಾಸಗಿ ಶಾಲೆಗಳು ಬಂದ್..!?

ರಾಜ್ಯದಲ್ಲಿ 10 ಸಾವಿರ ಖಾಸಗಿ ಶಾಲೆಗಳು ಬಂದ್..!?

ಬೆಂಗಳೂರು,ಡಿ.10- ಸೂಕ್ತ ಮಾರ್ಗಸೂಚಿಗಳ ಕೊರತೆ ಹಾಗೂ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 10 ಸಾವಿರ ಖಾಸಗಿ ಶಾಲೆಗಳು ಬಾಗಿಲು ಮುಚ್ಚುವ ಸಾಧ್ಯತೆಯಿದೆ.

ರಾಜ್ಯದ ಹಲವು ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ಈ ಶಾಲೆಗಳನ್ನು ಮುಚ್ಚದಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳಿಗೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ.

ಲೋಕೋಪಯೋಗಿ ಇಲಾಖೆ ಮಾರ್ಗಸೂಚಿಗಳನ್ನು ನೀಡಿದ್ದು, ಅಗ್ನಿಶಾಮಕ ದಳ ಮತ್ತು ಸುರಕ್ಷತಾ ಪ್ರಮಾಣಗಳನ್ನು 10 ದಿನಗಳ ಗಡುವಿನೊಳಗೆ ಪಡೆಯುವಂತೆ ಸೂಚಿಸಿದೆ. ಇಂದಿಗೂ ಇಲಾಖೆಯಿಂದ ಸರಿಯಾದ ಮಾರ್ಗಸೂಚಿ ಇಲ್ಲದಿರುವುದರಿಂದ ಭ್ರಷ್ಟ ಅಧಿಕಾರಿಗಳು ಹಣ ಮಾಡಿ ಪ್ರಮಾಣ ಪತ್ರ ನೀಡಲು ದಾರಿ ಮಾಡಿಕೊಟ್ಟಂತಾಗಿದೆ.

ಇಲಾಖೆ ಪ್ರಮಾಣ ಪತ್ರ ನೀಡುವ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. ಇಲಾಖೆಯ ಕಿರುಕುಳವನ್ನು ಸಹಿಸಲಾಗದೆ, ಗ್ರಾಮೀಣ ಪ್ರದೇಶದ ಕೆಲವು ಶಾಲೆಗಳು ಹಾಗೂ ಮಠಾೀಶರು ನಡೆಸುತ್ತಿರುವ ಸುಮಾರು 10,000 ಶಾಲೆಗಳು ಸೇರಿದಂತೆ ಸಣ್ಣ ಮತ್ತು ಮಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.