ಉಗ್ರ ಚಟುವಟಿಕೆಗೆ ಕೆಲ ದೇಶಗಳಿಂದ ಉದ್ದೇಶಪೂರ್ವಕ ಬೆಂಬಲ: ಭಾರತ ಆರೋಪ

ಉಗ್ರ ಚಟುವಟಿಕೆಗೆ ಕೆಲ ದೇಶಗಳಿಂದ ಉದ್ದೇಶಪೂರ್ವಕ ಬೆಂಬಲ: ಭಾರತ ಆರೋಪ

ವಿಶ್ವಸಂಸ್ಥೆ: 'ಹಲವು ದಶಕಗಳಿಂದ ಗಡಿಯುದ್ದಕ್ಕೂ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಭಾರತ ಬಲಿಪಶುವಾಗಿದೆ. ಇಂಥ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಾ, ಉಗ್ರರಿಗೆ ಆಶ್ರಯ ನೀಡುವ ಮೂಲಕ ಕೆಲವು ದೇಶಗಳು ತಪ್ಪಿತಸ್ಥ ಸ್ಥಾನದಲ್ಲಿವೆ' ಎಂದು ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚಾಟಿ ಬೀಸಿದೆ.

ಕೋವಿಡ್‌ ನಂತರದ ಸನ್ನಿವೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನಿಗ್ರಹಿಸುವ ಕುರಿತು ವರ್ಚುವಲ್‌ ಆಗಿ ನಡೆಯುತ್ತಿರುವ 'ಭಯೋತ್ಪಾದನಾ ನಿಗ್ರಹ ಸಪ್ತಾಹ'ದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ಪಾಕಿಸ್ತಾನದ ಹೆಸರು ಹೇಳದೇ, ಹೀಗೆ ಆರೋಪಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ದೊರೆಯುತ್ತಿರುವ ಕಾರಣದಿಂದಲೇ ಹಲವು ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ ಬಲಿಪಶುವಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲವು ದೇಶಗಳಿಗೆ, ಭಯೋತ್ಪಾದಕ ಚಟುವಟಿಕೆಗಳಿಗೆ ದೊರೆಯುತ್ತಿರುವ ಆರ್ಥಿಕ ನೆರವನ್ನು ನಿಗ್ರಹಿಸುವಷ್ಟು ಸಾಮರ್ಥ್ಯ ಇಲ್ಲ. ಅದರ ಜತೆಗೆ ಕಾನೂನು ಹೋರಾಟದ ಕುರಿತು ಮಾಹಿತಿ ಕೊರತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಇವೆಲ್ಲದರ ನಡುವೆ ಕೆಲವು ರಾಷ್ಟ್ರಗಳು ಉದ್ದೇಶಪೂರ್ವಕವಾಗಿಯೇ ಭಯೋತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸುತ್ತಾ, ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು, ಆಶ್ರಯ ನೀಡುತ್ತಾ, ತಪ್ಪಿತಸ್ಥ ಸ್ಥಾನದಲ್ಲಿವೆ ಎಂದು ತಿರುಮೂರ್ತಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವ, ಆರ್ಥಿಕ ನೆರವು ನೀಡುವ ರಾಷ್ಟ್ರಗಳನ್ನು ಗುರುತಿಸಿ, ಅವುಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ಕೆಲಸವನ್ನು ಅಂತರರಾಷ್ಟ್ರೀಯ ಸಮುದಾಯಗಳು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.