ಏಕದಿನ ವಿಶ್ವಕಪ್ ಬಾಯ್ಕಾಟ್ ಮಾಡ್ತೀವಿ ಅನ್ನೋದು ಮೂರ್ಖತನ : ಪಾಕ್ ವಿರುದ್ಧ ಮಾಜಿ ಆಟಗಾರನ ಕಿಡಿ
ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ಆಡಲು ಭಾರತ ಪಾಕಿಸ್ತಾನಕ್ಕೆ ಆಗಮಿಸದಿದ್ದರೂ ಪಾಕಿಸ್ತಾನ ಭಾರತದಲ್ಲಿ ಈ ವರ್ಷ ನಡೆಯುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸಬಾರದು ಎಂದು ಬುದ್ದಿವಾದ ಹೇಳಿದ್ದಾರೆ. ಭಾರತ ತಂಡ ಇಲ್ಲದಿದ್ದರೆ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಇನ್ಯಾವ ಆದಾಯ ಬರುತ್ತದೆ ಎಂದು ಪ್ರಶ್ನೆ ಮಾಡಿರುವ ಅವರು, ಬಾಯ್ಕಾಟ್ ಮಾಡ್ತೀವಿ ಅನ್ನೋದನ್ನ ಪಾಕಿಸ್ತಾನ ಮೊದಲು ಬಿಡಬೇಕು ಎಂದು ಹೇಳಿದರು.
ಭಾರತ ತಂಡ ಆಡದೇ ಇದ್ದರೂ ಆದಾಯ ಗಳಿಸುತ್ತೇವೆ ಎನ್ನುವ ವಿಶ್ವಾಸ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದ್ದರೆ ಅವರು ಪಾಕಿಸ್ತಾನದಲ್ಲೇ ಏಷ್ಯಾಕಪ್ ನಡೆಸುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ. "ಭಾರತವು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ. ಭಾರತವಿಲ್ಲದೆ ಪಂದ್ಯಾವಳಿಯನ್ನು ನಡೆಸಬಹುದೆಂದು ಪಾಕಿಸ್ತಾನ ಭಾವಿಸಿದರೆ, ಅವರು ಮುಂದುವರಿಯಬೇಕು. ಆದರೆ ಪಾಕಿಸ್ತಾನವು ವಿಶ್ವಕಪ್‌ಗೆ ಹೋಗದಿರುವುದು ಸರಿಯಾದ ಕ್ರಮವಲ್ಲ." ಎಂದು ಕನೇರಿಯಾ ಹೇಳಿದ್ದಾರೆ.
"ಏಕದಿನ ವಿಶ್ವಕಪ್ ಐಸಿಸಿಯ ಪಂದ್ಯಾವಳಿಯಾಗಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವಕಪ್ ಅನ್ನು ಬಾಯ್ಕಾಟ್ ಮಾಡಿದರೆ, ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಐಸಿಸಿ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಕೂಡ ಇದೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ. 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ನಡೆಯಲಿದ್ದು, ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಕೂಡ ಬಿಸಿಸಿಐ ಕಾರ್ಯದರ್ಶಿ ಮತ್ತು ಎಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ಹಠ ಮಾಡುತ್ತಿರುವ ಪಾಕಿಸ್ತಾನ ಬಿಸಿಸಿಐಗೆ ವಿಶ್ವಕಪ್ ಬಾಯ್ಕಾಟ್ ಮಾಡುವ ಬೆದರಿಕೆ ಹಾಕಲು ಯತ್ನಿಸುತ್ತಿದೆ. ಪಾಕಿಸ್ತಾನದ ಯಾವುದೇ ಹಠಕ್ಕೂ ಬಿಸಿಸಿಐ ಬಗ್ಗದಿರುವುದು ಅವರನ್ನು ಕೆರಳಿಸಿದೆ. ಭಾರತದ ಪಂದ್ಯಗಳು ಮಾತ್ರ ತಟಸ್ಥ ಸ್ಥಳದಲ್ಲಿ ನಡೆಯುವಂತೆ ಮಾಡಿ, ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡುವ ಲೆಕ್ಕಾಚಾರ ಕೂಡ ಪಿಸಿಬಿ ಮಾಡುತ್ತಿದೆ.
ದುಬೈನಲ್ಲಿ ಏಷ್ಯಾಕಪ್ ಆಯೋಜನೆ ಮಾಡಲಿ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಏಷ್ಯಾ ಕಪ್‌ನ ಸ್ಥಳಗಳನ್ನು ಖಚಿತಪಡಿಸಬೇಕು ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆದಷ್ಟು ಬೇಗ ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದ್ದಾರೆ. ವಿವಾದವನ್ನು ಹೆಚ್ಚು ಮಾಡಲು ಪ್ರಯತ್ನಿಸದೆ, ಪಾಕಿಸ್ತಾನ ತಟಸ್ಥ ಸ್ಥಳದಲ್ಲಿ ಪಂದ್ಯಾವಳಿ ಆಯೋಜಿಸಲು ಒಪ್ಪಿಕೊಳ್ಳಬೇಕು, ದುಬೈನಲ್ಲಿ ಏಷ್ಯಾಕಪ್ ಆಯೋಜನೆ ಮಾಡುವ ಬಗ್ಗೆ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.
"ಭಾರತ ಏಷ್ಯಾಕಪ್‌ನಲ್ಲಿ ಆಡದಿದ್ದರೂ ತಾನು ಪಂದ್ಯಾವಳಿ ಆಯೋಜನೆ ಮಾಡಿ ಸಾಕಷ್ಟು ಲಾಭ ಗಳಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅನಿಸಿದರೆ, ಅವರು ಪಾಕಿಸ್ತಾನದಲ್ಲೇ ಪಂದ್ಯಾವಳಿ ಆಯೋಜನೆ ಮಾಡಬಹುದು. ಆದರೆ, ನನಗೆ ಅನ್ನಿಸಿದಂತೆ ಪಾಕಿಸ್ತಾನ ದುಬೈನಲ್ಲಿ ಪಂದ್ಯಾವಳಿ ಆಯೋಜನೆ ಮಾಡುವುದನ್ನು ಪರಿಗಣಿಸಬೇಕು" ಎಂದು ಹೇಳಿದರು.
ಈ ವರ್ಷಾಂತ್ಯದಲ್ಲಿ ಭಾರತ ಐಸಿಸಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವುದರಿಂದ ಭಾರತ ಮತ್ತು ಪಾಕಿಸ್ತಾನ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇದಲ್ಲದೆ, 2025 ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಕೂಡ ಪಾಕಿಸ್ತಾನ ವಹಿಸಿಕೊಳ್ಳಲಿದೆ.