ಸೈನಿಕ ಶಾಲೆಗಳಲ್ಲಿ ಇನ್ಮುಂದೆ ಬಾಲಕಿಯರಿಗೂ ಪ್ರವೇಶ: ಪ್ರಧಾನಿ

ಸೈನಿಕ ಶಾಲೆಗಳಲ್ಲಿ ಇನ್ಮುಂದೆ ಬಾಲಕಿಯರಿಗೂ ಪ್ರವೇಶ: ಪ್ರಧಾನಿ
ನವದೆಹಲಿ: ಇನ್ನುಮುಂದೆ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
೭೫ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಬಾಲಕಿಯರಿಗೂ ಪ್ರವೇಶ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.
ಪ್ರಸ್ತುತ ೩೩ ಸೈನಿಕ ಶಾಲೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮಿಜೊರಾಮ್ ನಲ್ಲಿ ಎರಡೂವರೆ ವರ್ಷಗಳ ಹಿಂದೆ ಸೈನಿಕ ಶಾಲೆಗಳಲ್ಲಿ ಬಾಲಕಿ/ಯರಿಗೆ ಪ್ರವೇಶ ನೀಡುವ ಪ್ರಥಮ ಪ್ರಯೋಗವನ್ನು ನಡೆಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ, ಈಗ ಭಾರತ ಸರ್ಕಾರ ಎಲ್ಲ ಸೈನಿಕ ಶಾಲೆಗಳಲ್ಲಿಯೂ ಬಾಲಕಿಯರಿಗೆ ಪ್ರವೇಶ ಕಲ್ಪಿಸುತ್ತದೆ ಎಂದು ಹೇಳಿದ್ದಾರೆ.
ಸೈನಿಕ ಶಾಲೆಗಳ ಸೊಸೈಟಿ ಸೈನಿಕ ಶಾಲೆಗಳನ್ನು ನಡೆಸುತ್ತಿದ್ದು ಆಡಳಿತಾತ್ಮಕ ನಿಯಂತ್ರಣ ರಕ್ಷಣಾ ಸಚಿವಾಲಯದ್ದಾಗಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುವುದಕ್ಕೆ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗಿದೆ.ಭಾರತದ ಸೈನಿಕ ಸಾಲೆಗಳಲ್ಲಿ ದೇಶದ ಹೆಣ್ಣುಮಕ್ಕಳಿಗೂ ಅವಕಾಶ ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.