ಅರ್ಜಿ ತುಂಬುವಾಗ ಆದ ದೋಷ ಮುಂದಿಟ್ಟು ಉದ್ಯೋಗ ತಪ್ಪಿಸಲಾಗದು: ಹೈಕೋರ್ಟ್ ಮಹತ್ವದ ತೀರ್ಪು
ಯಾವುದೇ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವೇಳೆ ಯಾವುದೇ ದೋಷವಿರದಂತೆ ಅದನ್ನು ಭರ್ತಿ ಮಾಡಬೇಕಾಗುತ್ತದೆ. ಆದರೂ ಕೂಡ ಮಾನವ ಸಹಜ ಗುಣದಿಂದ ಕೆಲವೊಮ್ಮೆ ದೋಷ ಉಂಟಾಗುತ್ತದೆ. ಇದೀಗ ಇದೇ ರೀತಿಯ ಪ್ರಕರಣ ಒಂದರಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೌದು, ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆ ವೇಳೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಪರಿಶಿಷ್ಟ ಜಾತಿಗೆ ಸೇರಿದ ಹೇಮಂತ್ ಕುಮಾರ್ ಎಂಬ ಅಭ್ಯರ್ಥಿ ಅದರ ಬದಲಿಗೆ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸಿದ್ದರು. ಸೈಬರ್ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಈ ದೋಷ ಆಗಿತ್ತು.
ಇದನ್ನು ಸರಿಪಡಿಸಲು ಅವರು ಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಬಳಿಕ ಅವರು 2021ರ ಸೆಪ್ಟೆಂಬರ್ 19 ರಂದು ನಡೆದಿದ್ದ ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆ ಬರೆದಿದ್ದು ಜೇಷ್ಠತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ನಂತರ ಲಿಖಿತ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದಿದ್ದರು.
2022ರ ನವೆಂಬರ್ 25 ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಮನವಿ ಮಾಡಿಕೊಂಡಿದ್ದರ ನಡುವೆಯೂ ಇದರಲ್ಲಿ ಹೇಮಂತ್ ಕುಮಾರ್ ಅವರನ್ನು ಪರಿಶಿಷ್ಟ ಜಾತಿ ಬದಲು ಪರಿಶಿಷ್ಟ ಪಂಗಡ ಎಂದೇ ಪರಿಗಣಿಸಲಾಗಿತ್ತು. ಹೀಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ, ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ ಆನ್ಲೈನ್ ವೇಳೆ ಅರ್ಜಿ ಭರ್ತಿ ಮಾಡಿದಾಗ ಉಂಟಾದ ಲೋಪದ ಕಾರಣಕ್ಕೆ ಅವರಿಗೆ ಉದ್ಯೋಗ ನಿರಾಕರಿಸಲಾಗದು ಎಂದು ಮಹತ್ವದ ತೀರ್ಪು ನೀಡಿದೆ. ಅಲ್ಲವೇ ಅವರ ಅರ್ಜಿಯಲ್ಲಿ ಆದ ದೋಷವನ್ನು ತಿದ್ದುಪಡಿ ಮಾಡಿ ಉದ್ಯೋಗಕ್ಕೆ ಪರಿಗಣಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಆದೇಶಿಸಿದೆ.