ದುರ್ಗಾದೇವಿ ವಿಸರ್ಜನೆ : ನೀರಿನಲ್ಲಿ ಮುಳುಗಿ ೮ ಸಾವು

ದುರ್ಗಾದೇವಿ ವಿಸರ್ಜನೆ : ನೀರಿನಲ್ಲಿ ಮುಳುಗಿ ೮ ಸಾವು

ಕೋಲ್ಕತ್ತಾ, ಅ.೬- ಕಳೆದ ರಾತ್ರಿ ದುರ್ಗಾಮಾತೆಯ ವಿಗ್ರಹಗಳ ವಿಸರ್ಜನೆ ವೇಳೆ ಪಶ್ಚಿಮ ಬಂಗಾಳದ ಮಾಲ್ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ, ಕನಿಷ್ಠ ೮ ಜನರು ನೀರಿನಲ್ಲಿ ಮುಳುಗಿದ್ದಾರೆ ಹಾಗೂ ಹಲವರು ನಾಪತ್ತೆಯಾಗಿದ್ದಾರೆ.
ಜಲ್‌ಪೈಗುರಿಯಲ್ಲಿ ನಿಯೋರಾ ನದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನದಿಯಲ್ಲಿ ದಿಢೀರ್‌ನೆ ಉಂಟಾದ ಪ್ರವಾಹದಲ್ಲಿ ಅನೇಕ ಭಕ್ತರು ಕೊಚ್ಚಿಹೋಗಿದ್ದಾರೆ.

ಪ್ರವಾಹಕ್ಕೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಕ್ತರು ಕೊಚ್ಚಿಹೋಗಿದ್ದಾರೆ. ಅವರ ಪೈಕಿ ಸುಮಾರು ಎಂಟು ಮಂದಿ ಸಾವನ್ನಪ್ಪಿದ್ದು, ೧೦ಕ್ಕೂ ಅಧಿಕ ಭಕ್ತರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಕುರಿತು ಜಲ್‌ಪೈಗುರಿ ಪೊಲೀಸ್ ವರಿಷ್ಠಾಧಿಕಾರಿ ದೇಬರ್ಶಿ ದತ್ತಾ ಪ್ರತಿಕ್ರಿಯಿಸಿ, ಪ್ರವಾಹದಲ್ಲಿ ಅನೇಕ ಜನರು ಸಿಲುಕಿ ಎಂಟು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ೧೦ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟ್ವೀಟ್ ಮಾಡಿದ್ದು, ದುರ್ಗಾ ದೇವಿ ವಿಸರ್ಜನೆ ವೇಳೆ ಮಾಲ್ ನದಿಯಲ್ಲಿ ಉಂಟಾದ ಪ್ರವಾಹದಿಂದ ಅವಘಡ ಸಂಭವಿಸಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳು ತುರ್ತು ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.