ಚಿತ್ರದುರ್ಗ : ಭೀಕರ ರಸ್ತೆ ಅಪಘಾತ, ನಾಲ್ವರ ದುರ್ಮರಣ
ಚಿತ್ರದುರ್ಗ (ಡಿ.04) : ರಾಷ್ಟ್ರೀಯ ಹೆದ್ದಾರಿ 4 (48) ರ ದೊಡ್ಡಸಿದ್ದವ್ವನಹಳ್ಳಿ ಬಳಿ ಶನಿವಾರ ಮುಂಜಾನೆ 1:30 ರಿಂದ ಎರಡು ಗಂಟೆ ಸುಮಾರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.
ರಾಯಚೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಈರುಳ್ಳಿ ತುಂಬಿದ ಲಾರಿ ದೊಡ್ಡಸಿದ್ದವ್ವನಹಳ್ಳಿ ಬಳಿ ಪಂಚರ್ ಆಗಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿ ಟೈರ್ ಬದಲಾಯಿಸುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಗ್ಯಾಸ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ರೈತರು ಸೇರಿದಂತೆ ನಾಲ್ವರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಈರುಳ್ಳಿ ಚೀಲಗಳು ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿವೆ.
ಮೃತರನ್ನು ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ತಾಲೂಕಿನ ಮಂಜುನಾಥ, ವಿಜಯಪುರದ ಲಾರಿ ಕ್ಲೀನರ್ ಸಂಜಯ್, ರೋಣದ ಚಾಲಕ ಶರಣಪ್ಪ ಮೃತರು ಎಂದು ಗುರುತಿಸಲಾಗಿದೆ. ಗಾಯಗೊಂಡ ಗ್ಯಾಸ್ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದ ತಕ್ಷಣ ಎಸ್ ಪಿ ರಾಧಿಕಾ ಸೇರಿದಂತೆ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.