ಭೋಜ್‌ಪುರಿ ದಬಂಗ್ಸ್ ವಿರುದ್ಧ ಭರ್ಜರಿ ಜಯ : 4ನೇ ಬಾರಿ ಟ್ರೋಫಿ ಗೆದ್ದ ತೆಲುಗು ವಾರಿಯರ್ಸ್

ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನ 2023ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡ ಭೋಜ್‌ಪುರಿ ದಬಂಗ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿದೆ.
ವಿಶಾಖಪಟ್ಟಣದ ವೈಎಸ್ ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.
ಆದಿತ್ಯ ಓಜಾ 26 ರನ್ ಗಳಿಸಿದರೆ, ಅಸ್ಘರ್ ಖಾನ್ 11 ರನ್ ಗಳಿಸಿದರು. ಉದಯ್ ತಿವಾರಿ 10 ರನ್ ಗಳಿಸಿದರು. ತೆಲುಗು ವಾರಿಯರ್ಸ್ ಪರವಾಗಿ ನಂದಕಿಶೋರ್ 2 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ರಘು ಮತ್ತು ಪ್ರಿನ್ಸ್ ತಲಾ ಒಂದು ವಿಕೆಟ್ ಪಡೆದರು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತೆಲುಗು ವಾರಿಯರ್ಸ್ ಅಮೋಘ ಪ್ರದರ್ಶನ ನೀಡಿತು. ನಾಯಕ ಅಕಿಲ್ ಅಕ್ಕಿನೇನಿ ಸ್ಫೋಟಕ ಅರ್ಧಶತಕ ಗಳಿಸಿ ಮಿಂಚಿದರು. 32 ಎಸೆತಗಳಲ್ಲಿ 2 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 67 ರನ್ ಗಳಿಸಿದರು. ರಘು 7 ಎಸೆತಗಳಲ್ಲಿ 13 ರನ್ ಗಳಿಸಿದರು. 10 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕುವ ಮೂಲಕ 32 ರನ್‌ಗಳ ಮುನ್ನಡೆ ಪಡೆದುಕೊಂಡಿತು.
ಸಾಧಾರಣ ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ದಬಂಗ್ಸ್
32 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ದಬಂಗ್ಸ್ ಸಾಧಾರಣ ಮೊತ್ತ ಕಲೆಹಾಕಿತು. ಆದಿತ್ಯ ಓಜಾ 13 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 31 ರನ್ ಗಳಿಸಿದರು. ಉದಯ್ ತಿವಾರಿ 18 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 34 ರನ್ ಗಳಿಸಿದರು. ಮನೋಜ್ ತಿವಾರಿ 12 ಎಸೆತಗಳಲ್ಲಿ 14 ರನ್ ಗಳಿಸಿದರು. 3ನೇ ಇನ್ನಿಂಗ್ಸ್‌ನಲ್ಲಿ 10 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 89 ರನ್ ಗಳಿಸುವ ಮೂಲಕ ತೆಲುಗು ವಾರಿಯರ್ಸ್‌ಗೆ 57 ರನ್‌ಗಳ ಗುರಿ ನೀಡಿತು.
ಸುಲಭ ಗೆಲುವು ಸಾಧಿಸಿದ ತೆಲುಗು ವಾರಿಯರ್ಸ್
ಸುಲಭ ಗುರಿಯನ್ನು ಬೆನ್ನತ್ತಿದ ತೆಲುಗು ವಾರಿಯರ್ಸ್ 6.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 58 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಥಮನ್ 8 ಎಸೆತಗಳಲ್ಲಿ 10 ರನ್ ಗಳಿಸಿದರೆ, ಅಶ್ವಿನ್ ಬಾಬು 21 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಸಚಿನ್ ಜೋಶಿ 9 ಎಸೆತಗಳಲ್ಲಿ ಅಜೇಯ 14 ರನ್ ಗಳಿಸುವ ಮೂಲಕ ಗೆಲುವಿಗೆ ಕಾರಣವಾದರು.