ಕ್ರಿಕೆಟ್ ಕಿಟ್ ಖರೀದಿಸಲು ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದ ರೋಹಿತ್ ಶರ್ಮಾ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಯಶಸ್ವೀ ನಾಯಕರಲ್ಲೊಬ್ಬರು. ಅತ್ಯಂತ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ನಾಯಕ ಎನ್ನುವ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಮತ್ತೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ರೋಹಿತ್ ಶರ್ಮಾ ಕ್ರಿಕೆಟಿಗರಾಗಲು ಪಟ್ಟ ಕಷ್ಟದ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಸದಸ್ಯ ಮತ್ತು ಮಾಜಿ ಕ್ರಿಕೆಟಿಗ ಸ್ಪಿನ್ನರ್ ಪ್ರಗ್ಯಾನ್ ಓಜಾ ಮಾತನಾಡಿದ್ದಾರೆ. ಅವರು ರೋಹಿತ್ ಶರ್ಮಾ ಅವರೊಂದಿಗಿನ ಆರಂಭಿಕ ಸಂಭಾಷಣೆಯನ್ನು ನೆನಪಿಸಿಕೊಂಡರು. ರೋಹಿತ್ ಶರ್ಮಾ ಕ್ರಿಕೆಟ್ ಖರೀದಿ ಮಾಡಲು ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದರು ಎಂದು ಪ್ರಗ್ಯಾನ್ ಓಜಾ ಹೇಳಿದ್ದಾರೆ.
15 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರ
ದಲ್ಲಿ ರೋಹಿತ್ ಶರ್ಮಾರನ್ನು ತಾವು ಮೊದಲು ಭೇಟಿ ಮಾಡಿದ್ದಾಗಿ ಪ್ರಗ್ಯಾನ್ ಓಜಾ ಹೇಳಿದ್ದಾರೆ. ರೋಹಿತ್ ಶರ್ಮಾ ಹೊಂದಿದ್ದ ಪ್ರತಿಭೆ ಬಗ್ಗೆ ಮಾತನಾಡುತ್ತಿದ್ದ ಬಗ್ಗೆ ಓಜಾ ನೆನಪು ಮಾಡಿಕೊಂಡಿದ್ದಾರೆ.
ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ, ಭಾರತದ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ತಾವು ಆರಂಭಿಕ ದಿನಗಳಲ್ಲಿ ಮಾತನಾಡುತ್ತಿದ್ದ ಘಟನೆಗಳಲ್ಲಿ ಒಂದನ್ನು ನೆನಪಿಸಿಕೊಂಡರು. ರೋಹಿತ್ ತನ್ನ ಕ್ರಿಕೆಟ್ ಕಿಟ್ ಖರೀದಿಸಲು ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದರು ಎಂದು ಓಜಾ ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ತಮ್ಮ ಬಡತನದ ಬಗ್ಗೆ ಮಾತನಾಡುತ್ತಾ ಭಾವುಕರಾಗುತ್ತಿದ್ದರು ಎಂದು ಓಜಾ ತಿಳಿಸಿದ್ದಾರೆ.
ಮಧ್ಯಮ ಕುಟುಂಬ ವರ್ಗದಿಂದ ಬಂದಿದ್ದ ರೋಹಿತ್
"ರೋಹಿತ್ ಶರ್ಮಾ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಮತ್ತು ಅವರಿಗೆ ಕ್ರಿಕೆಟ್ ಕಿಟ್‌ಗಳನ್ನು ಖರೀದಿ ಮಾಡಲು ಕೂಡ ಹಣ ಇರುತ್ತಿರಲಿಲ್ಲ. ಆದರೂ ಹೇಗೆ ಕ್ರಿಕೆಟ್ ಕಿಟ್ ಖರೀದಿಸುತ್ತೀಯಾ ಎಂದು ಕೇಳಿದ್ದಕ್ಕೆ ರೋಹಿತ್ ಭಾವುಕರಾಗಿದ್ದರು. ಅವರು ಹಣವನ್ನು ಹೊಂದಿಸಲು, ಹಾಲಿನ ಪ್ಯಾಕೆಟ್‌ಗಳನ್ನು ಸಹ ವಿತರಿಸಿದರು. ಬಹಳ ಹಿಂದೆಯೇ ಅವರು ತುಂಬಾ ಕಷ್ಟಪಟ್ಟಿದ್ದರು, ಆದರೆ ಅವರು ಇಂದು ಮಾಡಿರುವ ಸಾಧನೆ ನೋಡಿದರೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ" ಎಂದು ಓಜಾ ಹೇಳಿದರು.
"15 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರದಲ್ಲಿ ನಾನು ರೋಹಿತ್ ಅವರನ್ನು ಮೊದಲು ಭೇಟಿಯಾದಾಗ, ಅವರು ತುಂಬಾ ವಿಶೇಷ ಆಟಗಾರ ಎಂದು ಹಲವರು ಹೇಳಿದರು. ಅಲ್ಲಿ ನಾನು ಅವರ ವಿರುದ್ಧ ಆಡಿ ವಿಕೆಟ್ ಪಡೆದೆ. ರೋಹಿತ್ ಶರ್ಮಾ ಹೆಚ್ಚು ಮಾತನಾಡದ ಸಾಮಾನ್ಯ ವ್ಯಕ್ತಿ, ಆದರೆ ಬ್ಯಾಟಿಂಗ್ ಮಾಡುವಾಗ ಮಾತ್ರ ತುಂಬಾ ಆಕ್ರಮಣಕಾರಿಯಾಗಿದ್ದರು. ನನ್ನ ಬೌಲಿಂಗ್ ಬಗ್ಗೆ ಅವರಿಗೆ ಅರಿವಿಲ್ಲದಿದ್ದರೂ ಆಕ್ರಮಣಕಾರಿಯಾಗಿ ಆಡುವುದನ್ನು ನೋಡಿ ನನಗೆ ಅಚ್ಚರಿಯಾಯಿತು. ನಂತರ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು" ಎಂದು ಹೇಳಿದರು.
ರೋಹಿತ್ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ವ್ಯಕ್ತಿ
"ರೋಹಿತ್‌ಗೆ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಲು ಅವಕಾಶ ಸಿಗುವವರೆಗೂ ನಾವು ಒಬ್ಬರಿಗೊಬ್ಬರು ಪರಿಚಯವಿದ್ದೆವು. ಆದರೆ ನಂತರ ನಮ್ಮ ಸ್ನೇಹ ಬೆಳೆಯಿತು. ಅವರು ಉತ್ತಮವಾಗಿ ಮಿಮಿಕ್ರಿ ಮಾಡುತ್ತಿದ್ದರು. ತಮಾಷೆ ಮಾಡುವ ಜನರನ್ನು ನಾನು ಇಷ್ಟಪಡುತ್ತೇನೆ ಮತ್ತು ರೋಹಿತ್ ಕೂಡ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ವ್ಯಕ್ತಿ" ಎಂದು ಹೇಳಿದರು.
ಮುಂಬೈ ಇಂಡಿಯನ್ಸ್ 2023ರ ಆವೃತ್ತಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಏಪ್ರಿಲ್ 2ರಂದು ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.