ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಅಕ್ರಮ: ಸಾ.ರಾ. ಮಹೇಶ್ ಆರೋಪ

ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಅಕ್ರಮ: ಸಾ.ರಾ. ಮಹೇಶ್ ಆರೋಪ

ಮೈಸೂರು: ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ಟಿ ಸೇರಿ ₹ 9 ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಈ ಒಂದು ಬ್ಯಾಗ್ ಬೆಲೆ ₹ 52 ಇದೆ ಎಂದು ದಾಖಲೆ ಪ್ರದರ್ಶಿಸಿ ಆರೋಪಿಸಿದರು.

ಬ್ಯಾಗ್ ಮೇಲೆ ಕೇವಲ ನಾನು ಪರಿಸರ ಸ್ನೇಹಿ ಎಂಬ ಸಾಲು ಹಾಗೂ ಹಾಗೂ ಚಿಹ್ನೆ ಮುದ್ರಣ ಮಾಡಿಸಲು, ಪ್ರತಿ ಚೀಲಕ್ಕೆ ₹ 42 ಬಿಲ್ ಮಾಡಿದ್ದಾರೆ. ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಇದಕ್ಕೆ ವಾಸ್ತವವಾಗಿ ತಗುಲುವುದು ₹ 1,47,15,000. ಆದರೆ ₹ 7 ಕೋಟಿಗೂ ಅಧಿಕ ರೂಪಾಯಿ ನೀಡಿ ಖರೀದಿ ಮಾಡಲಾಗಿದೆ. ಅಂದರೆ 6 ಕೋಟಿ 18 ಲಕ್ಷ ರೂ. ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ರೋಹಿಣಿ ಸಿಂಧೂರಿಯನ್ನು ವಜಾಗೊಳಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುವೆ. ಮುಖ್ಯ ಕಾರ್ಯದರ್ಶಿ ಅವರ ಕಚೇರಿ ಮುಂದೆ ಸದ್ಯದಲ್ಲಿಯೇ ಧರಣಿ ನಡೆಸುತ್ತೇನೆ ಎಂದು ಅವರು ಹೇಳಿದರು.