ಪುಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಆರಂಭಿಸಿದ ಮೊದಲ ದೇಶವಿದು...

ಪುಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಆರಂಭಿಸಿದ ಮೊದಲ ದೇಶವಿದು...

ಕ್ಯೂಬಾ, ಸೆಪ್ಟೆಂಬರ್ 7: ಕೊರೊನಾ ಸೋಂಕಿನ ವಿರುದ್ಧ ಪುಟ್ಟ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸುವ ಮೂಲಕ ಕ್ಯೂಬಾ, ಮಕ್ಕಳಿಗೆ ಕೊರೊನಾ ಲಸಿಕೆ ನೀಡಿದ ವಿಶ್ವದ ಮೊದಲ ದೇಶ ಎಂದು ಕರೆಸಿಕೊಂಡಿದೆ.

ಸ್ವದೇಶದಲ್ಲಿ ಅಭಿವೃದ್ಧಿಗೊಳಿಸಿದ ಕೊರೊನಾ ಲಸಿಕೆಯನ್ನು ಕ್ಯೂಬಾ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಆರಂಭಿಸಿದೆ. 2-11 ವರ್ಷದ ಮಕ್ಕಳಿಗೆ ಸೋಮವಾರದಿಂದ ಲಸಿಕೆ ನೀಡಲು ಆರಂಭಿಸಲಾಗಿದೆ.

ಈ ದ್ವೀಪದಲ್ಲಿ ಸುಮಾರು 11.2 ಮಿಲಿಯನ್ ಜನಸಂಖ್ಯೆಯಿದ್ದು, ಮಾರ್ಚ್ 2020ರಿಂದಲೂ ಇಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಶಾಲೆಗಳನ್ನು ಮತ್ತೆ ತೆರೆಯುತ್ತಿದ್ದು, ಶಾಲೆ ಆರಂಭಕ್ಕೂ ಮುನ್ನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ.

ದೇಶದಲ್ಲಿ ಅಭಿವೃದ್ಧಿಯಾದ ಅಬ್ದಾಲಾ ಹಾಗೂ ಸೊಬೆರಾನಾ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳನ್ನು ಮಕ್ಕಳ ಮೇಲೆ ಪೂರ್ಣಗೊಳಿಸಲಾಗಿದ್ದು, ಶುಕ್ರವಾರದಿಂದ 12 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕಾ ಅಭಿಯಾನವನ್ನು ಆರಂಭಿಸಿತ್ತು. ನಂತರ ಸೋಮವಾರದಿಂದ ಸಿಯೆನ್‌ಫ್ಯೂಗೋಸ್ ಪ್ರಾಂತ್ಯದಲ್ಲಿ 2-11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ.

ಹಲವು ದೇಶಗಳು ಹನ್ನೆರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುತ್ತಿವೆ ಹಾಗೂ ಕೆಲವು ದೇಶಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ವೆನೆಜುಲಾದಂಥ ದೇಶಗಳು ಕಿರಿಯ ಮಕ್ಕಳಿಗೆ ಲಸಿಕೆ ಹಾಕಲು ಯೋಜನೆ ರೂಪಿಸಿರುವುದಾಗಿ ಘೋಷಿಸಿವೆ. ಚಿಲಿ ದೇಶ ಚೀನಾದ ಸಿನೋವ್ಯಾಕ್ ಲಸಿಕೆಗಳನ್ನು ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ.

ಲ್ಯಾಟಿನ್ ಅಮೆರಿಕದಲ್ಲಿ ಮೊದಲು ಅಭಿವೃದ್ಧಿಯಾದ ಕ್ಯೂಬಾ ಕೊರೊನಾ ಲಸಿಕೆಗಳು ಅಂತರರಾಷ್ಟ್ರೀಯ, ವೈಜ್ಞಾನಿಕ ವಿಮರ್ಶೆಗೆ ಒಳಗಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದುಕೊಂಡಿಲ್ಲ.

ಈ ಲಸಿಕೆಗಳು ಮರುಸಂಯೋಜಕ ಪ್ರೊಟೀನ್ ತಂತ್ರಜ್ಞಾನವನ್ನು ಆಧರಿಸಿದ್ದು, ಮಕ್ಕಳಿಗೆ ನೀಡಬಹುದಾಗಿದೆ. ಅಮೆರಿಕದ ನೋವಾವ್ಯಾಕ್ಸ್ ಹಾಗೂ ಫ್ರಾನ್ಸ್‌ನ ಸನೋಫಿ ಲಸಿಕೆಗಳಲ್ಲೂ ಇದೇ ಪ್ರೊಟೀನ್ ತಂತ್ರಜ್ಞಾನವಿದ್ದು, ವಿಶ್ವ ಸಂಸ್ಥೆ ಅನುಮೋದನೆಗೆ ಕಾಯುತ್ತಿವೆ. ಬೇರೆ ಲಸಿಕೆಗಳಂತೆ ಈ ಲಸಿಕೆಗಳನ್ನು ತೀವ್ರ ಶೈತ್ಯೀಕರಣದ ಅಗತ್ಯವಿಲ್ಲ.

ಕ್ಯೂಬಾದಲ್ಲಿ ಈಚಿನ ತಿಂಗಳುಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಹೇರಿದ್ದವು. ಕೊರೊನಾ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೂ ಸೋಂಕಿನಿಂದ 5700 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅರ್ಧದಷ್ಟು ಮರಣ ಕಳೆದ ತಿಂಗಳಲ್ಲೇ ಸಂಭವಿಸಿದೆ.

ಭಾರತದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ: ಭಾರತದಲ್ಲಿ ಪ್ರಸ್ತುತ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ಕೊಡಲು ಅನುಮೋದನೆ ನೀಡಲಾಗಿದೆ.

ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಏಕೈಕ ಲಸಿಕೆ ಇದಾಗಿದೆ. ಕೊರೊನಾ ಎರಡನೇ ಅಲೆ ತೀವ್ರತೆ ತಗ್ಗಿದ ನಂತರ ಜುಲೈ-ಆಗಸ್ಟ್‌ನಲ್ಲಿ ಬಹುಪಾಲು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಿವೆ. ಮೂರನೇ ಅಲೆ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆದಿರುವ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಅಕ್ಟೋಬರ್‌ ತಿಂಗಳಿನಲ್ಲಿ ಮಕ್ಕಳಿಗೆ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ನೀಡಲು ಆರಂಭ ಮಾಡುವ ಸಾಧ್ಯತೆಯಿದೆ.